ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮೀಸಲಿಡಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Meeting on road accident prevention Mandya
Published on

ಮಂಡ್ಯ: ಅಪಘಾತವಾದ ನಂತರ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸುವುದರ ಬದಲು ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟು ಕಾಮಗಾರಿ ಕೈಗೊಳ್ಳುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವೇಶ್ವರಯ್ಯ ನಾಲೆ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ತಡೆಗಟ್ಟುವ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವೇಶ್ವರಯ್ಯ ನಾಲೆಯ ಸುತ್ತಲಿನ ರಸ್ತೆಗಳಲ್ಲಿ ಅಪಘಾತ ತಡೆಗಟ್ಟಲು 35 ಕಿ.ಮೀ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಂದ ರಸ್ತೆ ತಡೆಗೋಡೆ ನಿರ್ಮಿಸಲಾಗಿದೆ. ನಾಲೆಯ ರಸ್ತೆಯಲ್ಲಿ ಕಳೆದ 2 ವರ್ಷದಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 15 ಜನ ಮೃತ ಪಟ್ಟಿರುತ್ತಾರೆ. ಇದನ್ನು ತಡೆಗಟ್ಟಲು ತಾಂತ್ರಿಕ ಸಮಿತಿ ರಚಿಸಿ 20 ಕೋಟಿ ರೂ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ವಿಶ್ವೇಶ್ವರಯ್ಯ ನಾಲೆ ಅಂದಾಜು 540 ಕಿ.ಮೀ ವ್ಯಾಪ್ತಿಯಾಗಿರುವುದರಿಂದ ಸಂಪೂರ್ಣವಾಗಿ ತಡೆಗೋಡೆ ನಿರ್ಮಿಸುವುದು ಕಷ್ಟಕರ. ಆದ್ದರಿಂದ ಅಪಘಾತ ವಲಯ ಗುರುತಿಸಿ ಲೋಕೋಪಯೋಗಿ ಇಲಾಖೆಯಿಂದ 20 ಕಿ.ಮೀ ಹಾಗೂ ನೀರಾವರಿ ಇಲಾಖೆಗಳಿಂದ 13 ಕಿ.ಮೀನಷ್ಟು ಕ್ರ್ಯಾಷ್ ಬ್ಯಾರಿಯರ್ ನಿರ್ಮಿಸಲಾಗಿದೆ. ಕ್ರ್ಯಾಷ್ ಬ್ಯಾರಿಯರ್ ಜತೆಗೆ ವೈಜ್ಞಾನಿಕ ರಸ್ತೆ ಡುಬ್ಬ, ರಂಬಲ್ ಸ್ಟ್ರಿಪ್ ನಿರ್ಮಾಣ, ಸೂಚನಾ ಫಲಕ ಅಳವಡಿಸುವ ಕೆಲಸಗಳನ್ನು ಕೈಗೊಳ್ಳುವಂತೆ ಈಗಾಗಲೇ ತಿಳಿಸಲಾಗಿತ್ತು. ಲೋಕೋಪಯೋಗಿ, ಕಾವೇರಿ ನೀರಾವರಿ ನಿಗಮ, ಹೇಮಾವತಿ ನಾಲಾ ವಿಭಾಗದವರು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಸಲ್ಲಿಸಬೇಕು. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಹೆಚ್ಚಿನ ಭಾಗದ ರಸ್ತೆ ಬರಲಿದ್ದು, ಇಲಾಖೆಗೆ ನೀಡಲಾಗುವ ಅನುದಾನದಲ್ಲಿ ಅಪಘಾತ ತಡೆಗಟ್ಟಲು ಅನುದಾನ ಮೀಸಲಿಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಹರ್ಷ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಶಂಕರ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net