ವಲಸೆ ಮಕ್ಕಳ ಸುರಕ್ಷತೆ ಗ್ರಾಪಂ ಜವಾಬ್ದಾರಿ: ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಮಿಕ್ಕೆರೆ ವೆಂಕಟೇಶ್ ಸೂಚನೆ

Meeting on Protection of Migrant Children Mandya
Published on

ಮಂಡ್ಯ: ವಲಸೆ ಮಕ್ಕಳ ಸುರಕ್ಷತೆಗೆ ಸ್ಥಳೀಯ ಗ್ರಾಮ ಪಂಚಾಯಿತಿಗಳು ಕ್ರಮ ವಹಿಸಬೇಕು. ಇದರ ಬಗ್ಗೆ ಸರ್ಕಾರವು ಸಹ ತಿಳಿಸಿದೆ. ಮಾತ್ರವಲ್ಲದೆ ವಲಸೆ ಮಕ್ಕಳ ರಕ್ಷಣೆಗಾಗಿಯೇ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದರ ಉದ್ದೇಶವನ್ನು ತಿಳಿದುಕೊಂಡು ಮಕ್ಕಳ ರಕ್ಷಣೆ ಮಾಡಬೇಕು. ಒಟ್ಟಾರೆಯಾಗಿ ವಲಸೆ ಕುಟುಂಬಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಮಿಕ್ಕೆರೆ ವೆಂಕಟೇಶ್ ಸೂಚಿಸಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ತಾಲೂಕು ಅಧಿಕಾರಿಗಳು ಮತ್ತು ಪಿಡಿಒಗಳೊಂದಿಗೆ ವಲಸೆ ಮಕ್ಕಳ ರಕ್ಷಣೆ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಕೊಪ್ಪಳದಿಂದ ಕಬ್ಬು ಕಟಾವಿಗೆ ವಲಸೆ ಬರುತ್ತಿದ್ದಾರೆ. ಮಹಾರಾಷ್ಟ್ರದಿಂದಲೂ ಕೂಲಿ ಕೆಲಸಕ್ಕೆಂದು ಬರುತ್ತಾರೆ. ಅಂತಹವರ ಮಕ್ಕಳ ರಕ್ಷಣೆಗೆ ನಾವು ಬದ್ಧರಾಗಿರಬೇಕು. ಕೆಲವು ಸಮಯದಲ್ಲಿ ಹಲವು ಘಟನೆಗಳು ನಡೆಯುತ್ತವೆ. ಅವುಗಳನ್ನು ತಪ್ಪಿಸಲು ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯವರು ಸೇರಿದಂತೆ ಸಂಘ ಸಂಸ್ಥೆಯವರು ಸಹಕರಿಸಬೇಕು ಎಂದು ಮನವಿ ಮಾಡಿದರು.

ರಾಜ್ಯಕ್ಕೆ ವಲಸೆ ಬಂದಿರುವ ಎಲ್ಲ ಕುಟುಂಬದ ಮಕ್ಕಳ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಆ ಮೂಲಕ ವಲಸೆ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಇತರೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ವಲಸೆ ಮಕ್ಕಳನ್ನು ಗುರುತಿಸಿ ಅವರಿಗೆ ಭದ್ರತೆ ನೀಡುವುದು ಮುಖ್ಯವಾಗಬೇಕಿದೆ. ಆರು ವರ್ಷದೊಳಗಿನ ಅಥವಾ ಇದಕ್ಕೂ ಮೇಲ್ಪಟ್ಟಂತಹ ಮಕ್ಕಳು ಕಂಡು ಬಂದಿರುವ ಹಿನ್ನಲೆಯಲ್ಲಿ ಅವರಿಗೆ ಶಿಕ್ಷಣ, ಸೌಲಭ್ಯ ನೀಡಬೇಕು. ಇದರ ಜತೆಗೆ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಶ್ಮಿ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಯಾರೇ ಮಾಹಿತಿ ನೀಡಿದರೂ ಅದನ್ನು ಗೌಪ್ಯವಾಗಿ ಇಡಲಾಗುವುದು. ಬಾಲ್ಯ ವಿವಾಹದ ಬಗ್ಗೆ ಜಾತ್ರೆ, ಸಭೆ ಸಮಾರಂಭಗಳಲ್ಲಿ ಅರಿವು ಮೂಡಿಸುವುದನ್ನು ಅಧಿಕಾರಿಗಳು ಮಾಡಬೇಕು ಎಂದು ಸಲಹೆ ನೀಡಿದರು.

ತಹಸೀಲ್ದಾರ್ ಡಾ.ಶಿವಕುಮಾರ ಬಿರಾದರ್, ಬಿಇಒ ಮಹದೇವ, ತಾಲೂಕು ಅರೋಗ್ಯ ಅಧಿಕಾರಿ ಜವರೇಗೌಡ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಎಂ.ಕೆ.ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net