ಪೊಲೀಸರ ಮೇಲಿದೆ ಸುರಕ್ಷತೆ ಹೊಣೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

Meeting on police deployment mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಮೂರು ದಶಕದ ಬಳಿಕ ನಡೆಯುತ್ತಿದೆ. ಅಂತೆಯೇ ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಆದ್ದರಿಂದ ಗಣ್ಯರು, ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರ ಸುರಕ್ಷತೆ ಕಾಪಾಡುವ ಹೊಣೆ ಪೊಲೀಸರ ಮೇಲಿದೆ. ಯಾವುದೇ ಅನಾಹುತಕ್ಕೆ ಎಡೆಮಾಡಿಕೊಡದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮ್ಮೇಳನದ ಪೊಲೀಸ್ ಬಂದೋಬಸ್ತ್ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಆಗಮಿಸುವವರಿಗೆ ಸಂಚಾರ ಮಾರ್ಗದ ಫಲಕ ಹಾಗೂ ಆಗಮನ, ನಿರ್ಗಮನದ ಸ್ಥಳಗಳ ಕುರಿತ ಮಾಹಿತಿಯನ್ನು ಹೆದ್ದಾರಿಯಲ್ಲಿ ಹಾಕಬೇಕು. ಜನದಟ್ಟಣೆ ಹೆಚ್ಚಾಗಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು. ವ್ಯಾಪಕವಾಗಿ ಪೊಲೀಸ್ ಬಂದೋಬಸ್ತ್ ಆಗಬೇಕು ಎಂದರು.

ಸಮ್ಮೇಳನದ ಸಂಬಂಧ ಬಂದೋಬಸ್ತ್‌ಗೆ ನಿಯೋಜನೆಗೊಳ್ಳಲಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಊಟ, ತಿಂಡಿ, ವಸತಿ ಸೌಕರ್ಯ ಕಲ್ಪಿಸಬೇಕು. ಗಣ್ಯರ ಭದ್ರತೆಯಲ್ಲಿ ಲೋಪವಾಗದಂತೆ ನಿಗಾ ವಹಿಸಬೇಕು. ಅಡುಗೆ ಮಾಡುವ ಸ್ಥಳ, ಪಾರ್ಕಿಂಗ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬೆಂಕಿ ಅವಘಢ ಸಂಭವಿಸಿದರೆ, ಅದನ್ನು ನಂದಿಸಲು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಸಮ್ಮೇಳನಾಧ್ಯಕ್ದರ ಮೆರವಣಿಗೆ ಸಾಗುವ ಮಾರ್ಗದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗುತ್ತದೆ. ಬೆಂಗಳೂರು, ಮೈಸೂರು ಕಡೆಯಿಂದ ಆಗಮಿಸುವವರಿಗೆ, ನಿರ್ಗಮಿಸುವವರಿಗೆ ಮಾರ್ಗದ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ. ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಲಾಗುವುದು. 67 ಎಕರೆಗೂ ಅಧಿಕ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಎಲ್ಲ ಕಡೆ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.

6 ಎಎಸ್‌ಪಿ, 21 ಡಿವೈಎಸ್‌ಪಿ, 63 ಸಿಪಿಐ, 170 ಪಿಎಸ್‌ಐ, 262 ಎಎಸ್‌ಐ, 1500 ಪೇದೆ, 1000 ಹೋಂ ಗಾರ್ಡ್, 165 ಮಹಿಳಾ ಕಾನ್‌ಸ್ಟೇಬಲ್ ಒಳಗೊಂಡಂತೆ 14 ಜಿಲ್ಲೆಯಿಂದ 3,200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಆಗಮಿಸಲಿದ್ದಾರೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಪಾಳಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಸಂಚಾರ ನಿರ್ವಹಣೆ, ಪಾರ್ಕಿಂಗ್, ಊಟದ ಕೌಂಟರ್, ವೇದಿಕೆ ಹೀಗೆ ಎಲ್ಲ ಕಡೆ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, ಹಗಲು ಮತ್ತು ರಾತ್ರಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿ ನಿರತರಾಗಿರಲಿದ್ದಾರೆ. ಸಿಸಿಟಿವಿ ನಿಗಾ ವ್ಯವಸ್ಥೆ ಮಾಡಲಾಗಿದೆ. ಅಪರಾಧ ಹಾಗೂ ಕಳ್ಳತನ ತಡೆಯಲು ಅಪರಾಧಿ ಪತ್ತೆ ದಳ ಹಾಗೂ ಮಫ್ತಿಯಲ್ಲಿ ಪೊಲೀಸರು ಗಸ್ತು ತಿರುಗಲಿದ್ದಾರೆ ಎಂದರು.

ಪೊಲೀಸರು ತಂಗಲು ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ವಾಹನಗಳಿಗೆ ಪಾರ್ಕಿಂಗ್ ಪಾಸ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಹೆದ್ದಾರಿ ಹಾಗೂ ನಗರದಲ್ಲಿ ಟೋಯಿಂಗ್ ವಾಹನಗಳ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. 10ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗುತ್ತಿದೆ. ಪೊಲೀಸ್ ಔಟ್‌ಪೋಸ್ಟ್, ಮಹಿಳಾ ಸಹಾಯವಾಣಿ ಕೇಂದ್ರಗಳನ್ನು ಸಹ ತೆರೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರತಿ ಅರ್ಧ ಗಂಟೆಗೆ ಒಂದರಂತೆ ವಿಶೇಷ ಸಾಹಿತ್ಯ ಸಾರಿಗೆ ಬಸ್‌ಗಳು ಸಂಚರಿಸಲಿವೆ. ಪ್ರತಿ ತಾಲೂಕಿಗೆ 15 ಬಸ್‌ನಂತೆ 105 ಬಸ್‌ಗಳು ಸಂಚರಿಸಲಿವೆ. ನಗರದಿಂದ 15 ಬಸ್‌ಗಳು ಉಚಿತವಾಗಿ ಸಂಚರಿಸಲಿವೆ. ನೋಂದಣಿ ಕೇಂದ್ರದ ಸಮೀಪ ಆರೋಗ್ಯ ಕೇಂದ್ರ ತೆರೆಯಲಾಗುತ್ತಿದ್ದು, ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ದಿನೇಶ್‌ಗೂಳಿಗೌಡ, ಡಿಐಜಿಪಿ ಡಾ.ಬೋರಲಿಂಗಯ್ಯ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಎಡಿಸಿ ಬಿ.ಸಿ.ಶಿವಾನಂದಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net