

ಮಂಡ್ಯ: ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯದಲ್ಲಿ ಭತ್ತದ ಇಳುವರಿ ಕಡಿಮೆ ಬರುತ್ತಿದೆ. ಇದಕ್ಕೆ ಮುಖ್ಯಕಾರಣ ಅತಿಯಾದ ಯೂರಿಯಾ ಬಳಕೆ ಎಂದು ಮಂಡ್ಯ ವಿಭಾಗದ ಉಪ ಕೃಷಿ ನಿರ್ದೇಶಕಿ ಕೆ.ಮಾಲತಿ ಹೇಳಿದರು.
ಭತ್ತದ ಬೇಸಾಯ ಕ್ರಮ ಹಾಗೂ ಜೈವಿಕ ಗೊಬ್ಬರ, ಲಘು ಪೋಷಕಾಂಶ ಬಳಕೆ ಬಗ್ಗೆ ನಗರದ ಉಪ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೃಷಿ ವಿಜ್ಞಾನಿಗಳು ಹಾಗೂ ರೈತರೊಂದಿಗೆ ಆಯೋಜಿಸಿದ್ದ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಮಾತನಾಡಿದ ಅವರು, ಸಮತೋಲನ ಪೋಷಕಾಂಶ ಬಳಕೆ ಮಾಡದಿರುವುದು. ಯಥೇಚ್ಚವಾಗಿ ನೀರನ್ನು ಹರಿಸುವುದರಿಂದ ಮಣ್ಣಿನ ಸತ್ವ ಕಳೆದುಕೊಂಡಿದೆ. ನೀರನ್ನು ಯಾವಾಗಲೂ ಜಮೀನಿನಲ್ಲಿ ನಿಲ್ಲಿಸುವುದರಿಂದ ಇಳುವರಿ ಕುಂಠಿತವಾಗುತ್ತಿದೆ. ಜತೆಗೆ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯಿಲ್ಲದೆ ಮಣ್ಣಿನಲ್ಲಿ ಸಾವಯವ ಅಂಶ, ಜಿಂಕ್, ಬೋರನ್, ಪೊಟ್ಯಾಷ್ ಕೊರತೆ ಕಂಡುಬರುತ್ತದೆ. ಆದ್ದರಿಂದ ಇಳುವರಿ ಹೆಚ್ಚಿಸಲು ಜೈವಿಕ ಗೊಬ್ಬರ ಮತ್ತು ಲಘು ಪೋಷಕಾಂಶಗಳ ಬಳಕೆ ಮಾಡಬೇಕು ಎಂದರು.
ವಿ.ಸಿ ಫಾರ್ಮ್ ಕೃಷಿ ಮಹಾವಿದ್ಯಾಲಯದ ಕೃಷಿ ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಎಸ್.ಆಶಾ ಮತ್ತು ಮಂಡ್ಯ ವಲಯ ಸಂಶೋಧನಾ ಕೇಂದ್ರದ ಬೇಸಾಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ.ತಿಮ್ಮೇಗೌಡ ಮಾತನಾಡಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸುನೀತಾ, ದೀಪಕ್, ಪ್ರತಿಭಾ ಉಪಸ್ಥಿತರಿದ್ದರು