ಲೋಕಸೇವಾ ಆಯೋಗ ಪಾರದರ್ಶಕ ಪರೀಕ್ಷೆ

udp-22-dc
Published on: 

ಉಡುಪಿ: ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಗೆಜೆಟೆಡ್​ ಪ್ರೊಬೇಷನರ್​ ಗ್ರೂಪ್​ ಎ ಮತ್ತು ಗ್ರೂಪ್​ ಬಿ ವೃಂದದ ಹುದ್ದೆಗಳಿಗೆ ಆ. 27 ರಂದು ನಡೆಯುವ ಪೂರ್ವಭಾವಿ ಪರೀಕ್ಷೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2023ನೇ ಸಾಲಿನ ಗೆಜೆಟೆಡ್​ ಪ್ರೊಬೇಷನರ್​ ಗ್ರೂಪ್​ ಎ ಮತ್ತು ಗ್ರೂಪ್​ ಬಿ ವೃಂದದ 384 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಗಳು ಆ. 27ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರ ವರೆಗೆ ಪತ್ರಿಕೆ- 1 ಹಾಗೂ ಮಧ್ಯಾಹ್ನ 2 ರಿಂದ ಸಾಯಂಕಾಲ 4 ಗಂಟೆಯವರೆಗೆ ಪತ್ರಿಕೆ- 2 ಪರೀಕ್ಷೆಗಳು ಎರಡು ಪಾಳಿಯಲ್ಲಿ ನಡೆಯಲಿದೆ. ಜಿಲ್ಲೆಯ ಮುಖ್ಯ ಮೇಲ್ವಿಚಾರಕರು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯೋಗವು ನೀಡಿರುವ ಮಾರ್ಗಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.

ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ತಪಾಸಣಾ ಸಿಬ್ಬಂದಿ ಮೊದಲ ಹಂತದಲ್ಲಿ ಮುಖ್ಯಗೇಟ್​ ಬಳಿಯೇ ನಿಲ್ಲಿಸಿ ತಪಾಸಣೆ ಮಾಡಿದ ನಂತರವೇ ಒಳಗೆ ಬಿಡಬೇಕು. ಎರಡನೇ ಹಂತದಲ್ಲಿ ಪರೀಕ್ಷಾ ತಪಾಸಣೆ ನಡೆಸಿದ ಎಲ್ಲಾ ಅಭ್ಯರ್ಥಿಗಳ ಗುರುತಿನ ಚೀಟಿ, ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಿ, ಅವರುಗಳ ಅಭ್ಯರ್ಥಿತ್ವದ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಲು ಅನುಮತಿಸಬೇಕು ಎಂದರು.
ಪರೀಕ್ಷಾ ಕೊಠಡಿಗಳಲ್ಲಿನ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಬಾಡಿ ಕ್ಯಾಮೆರಾಗಳು ಪರೀಕ್ಷಾ ಪ್ರಕ್ರಿಯೆ, ಅಭ್ಯರ್ಥಿಗಳ ಹಾಗೂ ಸಂವೀಕ್ಷಕರ ಚಲನವನಲ, ಮುಖಚಹರೆಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವಂತೆ ಅಳವಡಿಸಲು ಸೂಕ್ತ ಕ್ರಮ ವಹಿಸಬೇಕು. ಪರೀಕ್ಷಾ ಉಪಕೇಂದ್ರಗಳಿಗೆ ಜಾಮರ್​ ಅಳವಡಿಸಬೇಕು ಎಂದರು.

ಪರೀಕ್ಷಾ ಕೊಠಡಿಗಳಲ್ಲಿ ಲೈಟ್​ ಹಾಗೂ ಫ್ಯಾನ್​ ವ್ಯವಸ್ಥೆ, ಕುಡಿಯುವ ನೀರು, ಗಡಿಯಾರದ ವ್ಯವಸ್ಥೆಯನ್ನು ಕಲ್ಪಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಮಾರ್ಗಾಧಿಕಾರಿಗಳೂ ಪರೀಕ್ಷಾ ಪೂರ್ವ ದಿನದಂದು ಉಪಕೇಂದ್ರಗಳಿಗೆ ಭೇಟಿ ನೀಡಿ, ಪರೀಶಿಲಿಸಿ ವರದಿ ಮಾಡಬೇಕು ಎಂದರು.

ಜಿಲ್ಲಾ ತ್ರಿಸದಸ್ಯರ ಸಮಿತಿಯ ಉಸ್ತುವಾರಿಯಲ್ಲಿ ಪರೀಕ್ಷೆಗೆ ಸಂಬಂಧಪಟ್ಟ ಗೌಪ್ಯ ಸಾಮಾಗ್ರಿಗಳನ್ನು ಜಿಲ್ಲಾ ಖಜಾನೆಯ ಸುಪರ್ದಿಯಲ್ಲಿರಿಸಿ, ಪರೀಕ್ಷಾ ದಿನದಂದು ಸೂಕ್ತ ಬಂದೋಬಸ್ತ್​ನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್​, ಎಎಸ್​ಪಿ ಟಿ.ಸಿದ್ದಲಿಂಗಪ್ಪ, ಡಿಡಿಪಿಐ ಗಣಪತಿ, ಡಿಡಿಪಿಯು ಮಾರುತಿ, ಡಾ. ಜಿ. ಶಂಕರ್​ ಕಾಲೇಜಿನ ಪ್ರಾಚಾರ್ಯರ ಪ್ರೊ. ಭಾಸ್ಕರ್​ ಶೆಟ್ಟಿ ಉಪಸ್ಥಿತರಿದ್ದರು.