ಆಶ್ರಯ ನಿವೇಶನ ಹಂಚಿಕೆಗೆ ಜು. 4ರಂದು ಸಭೆ

meeting on july 4 for Ashraya site distribution
Published on

ಬ್ಯಾಡಗಿ: ಪುರಸಭೆಯ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಂಚಿಕೆ ಹಾಗೂ ಶಾಶ್ವತ ಪರಿಹಾರ ಒದಗಿಸಲು ಹಾವೇರಿ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಜು. 4ರಂದು ಸಭೆ ಏರ್ಪಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರಿ ತಿಳಿಸಿದರು.

ಪಟ್ಟಣದ ಪುರಸಭೆ ಕಾರ್ಯಾಲಯದ ಬಳಿ ಆಶ್ರಯ ಮನೆ ಹೋರಾಟ ಸಮಿತಿ ನೂರಾರು ಮಹಿಳೆಯರೊಂದಿಗೆ ಮೂರು ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಮಾತುಕತೆ ನಡೆಸಿದರು.

ನಿರಾಶ್ರಿತರ ಸಮಸ್ಯೆ ಕುರಿತು ಮುಖ್ಯಾಧಿಕಾರಿಯಿಂದ ಸಂಪೂರ್ಣ ದಾಖಲೆಗಳ ಮಾಹಿತಿ ಪಡೆದಿದ್ದೇನೆ. ಜಿ ಪ್ಲಸ್ ಮನೆ ಅಥವಾ ನಿವೇಶನ ನೀಡಬೇಕು ಎನ್ನುವ ಕುರಿತು ಇನ್ನೂ ನಿರ್ಧರಿಸಿಲ್ಲ. ಹಿಂದಿನ 633 ಅರ್ಹರ ಪಟ್ಟಿ ಪುನ ಪರಿಶೀಲಿಸಿ, ಅರ್ಹ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಚರ್ಚಿಸಲಾಗುವುದು. ಸಭೆಯಲ್ಲಿ ಮುಖ್ಯಾಧಿಕಾರಿ, ಆಶ್ರಯ ಮನೆ ಹೋರಾಟ ಸಮಿತಿ ಪದಾಧಿಕಾರಿಗಳು ಪಾಲ್ಗೊಳ್ಳುವರು. ಎಲ್ಲರಿಗೂ ನ್ಯಾಯ ಒದಗಿಸಲು ನಿರ್ಧರಿಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಮಾತನಾಡಿ, ಜಿ ಪ್ಲಸ್ ಮಾದರಿ ಆಶ್ರಯ ಮನೆ ಪಡೆಯಲು 580 ಜನ ಫಲಾನುಭವಿಗಳು ತುಂಬಿದ 1.74 ಲಕ್ಷ ರೂಪಾಯಿಯನ್ನು ಬಡ್ಡಿ ಸಮೇತ ವಾಪಸ್ ನೀಡಲಾಗುವುದು. ಉಚಿತ ನಿವೇಶನ ವಿತರಿಸಿದಲ್ಲಿ ಫಲಾನುಭವಿಗಳಿಂದ ವಂತಿಕೆ ಹಣ ಪಡೆಯುವುದಿಲ್ಲ. ಬಡವರು ತಮ್ಮ ಹಣದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಶೀಘ್ರದಲ್ಲೆ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಇತ್ಯರ್ಥಪಡಿಸಲಿದ್ದಾರೆ ಎಂದರು.

ಹೋರಾಟ ಸಮಿತಿ ಸಂಚಾಲಕ ಪಾಂಡುರಂಗ ಸುತಾರ ಮಾತನಾಡಿ, 15 ವರ್ಷಗಳಿಂದ ಬಡವರು ನಿವೇಶನಕ್ಕೆ ಹೋರಾಡುತ್ತಿದ್ದು, 10 ಎಕರೆ ಮಲ್ಲೂರ ರಸ್ತೆಯ ನಿವೇಶನ ಭೂಮಿ ಹಾಗೂ ಆಶ್ರಯ ಪ್ಲಾಟ್‌ನಲ್ಲಿ ಖಾಲಿಯಿರುವ ಜಾಗ ಗುರುತಿಸಿ ಅರ್ಹರಿಗೆ ಹಂಚಿಕೆ ಮಾಡಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜು. 4 ರಂದು ಸಭೆ ನಡೆಸಲು ನಿರ್ಧರಿಸಿದ್ದಾರೆ. ಅವರು ನೀಡಿದ ಭರವಸೆಯಿಂದ ಪ್ರತಿಭಟನೆ ವಾಪಸ್ ಪಡೆಯುತ್ತೇವೆ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಎಚ್. ಚನ್ನಪ್ಪ, ಮಮತಾ ಹೊಸಗೌಡ್ರ, ಆಶ್ರಯ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಚಲವಾದಿ, ಸಂಚಾಲಕಿ ಪರೀದಾಭಾನು ನದಿಮುಲ್ಲಾ, ಮಂಜುಳಾ ಬಂಡಿವಡ್ಡರ, ಪಾರವ್ವ ಮಡಿವಾಳರ, ಗುಡ್ಡಪ್ಪ ಆಡಿನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net