ಅನರ್ಹರನ್ನು ಕೈಬಿಡಲು ಸಮಗ್ರ ಪರಿಷ್ಕರಣೆ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

Meeting on Electoral Roll Revision Mandya
Published on

ಮಂಡ್ಯ: ಅನರ್ಹ ಮತದಾರರು ಮತಪಟ್ಟಿಯಲ್ಲಿ ಇರಬಾರದು. ಅದೇ ರೀತಿ ಅರ್ಹ ಮತದಾರರು ಮತದಾನ ಪಟ್ಟಿಯಿಂದ ಹೊರಗುಳಿಯಬಾರದೆಂಬ ಉದ್ದೇಶದಿಂದ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಮರಣ ಹೊಂದಿರುವವರ ಹೆಸರುಗಳಿವೆ. ಒಬ್ಬರ ಹೆಸರು ಎರಡು ಅಥವಾ ಹೆಚ್ಚಿನ ಕಡೆ ಮತದಾರರ ಪಟ್ಟಿಯಲ್ಲಿದೆ ಎಂಬ ದೂರುಗಳು ಸಾಮಾನ್ಯವಾಗಿ ಕೇಳಿಬರುತ್ತದೆ. ಅನರ್ಹ ಮತದಾರರ ಹೆಸರನ್ನು ಕೈಬಿಡಲು ವಿಶೇಷ ಸಮಗ್ರ ಪರಿಷ್ಕರಣೆ ಸಹಕಾರಿಯಾಗಲಿದೆ ಎಂದರು.

ಈಗಾಗಲೇ ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೂ ಬಿಎಲ್ಒಗಳನ್ನು ನೇಮಿಸಲಾಗಿದೆ. ಮತದಾರರ ವಿವರ ಒಳಗೊಂಡ ನಮೂನೆಯನ್ನು ಚುನಾವಣಾ ಆಯೋಗದಿಂದ ನೀಡಲಾಗುವುದು. ಬಿಎಲ್ಒಗಳು ನಮೂನೆಯನ್ನು ಮನೆ ಮನೆಗೆ ತಲುಪಿಸಲಿದ್ದಾರೆ. ಮತದಾರರು ತಮ್ಮ ಎಲ್ಲ ದಾಖಲೆಗಳು ಸರಿ ಇದೆ ಎಂದು ಧೃಢೀಕರಿಸಿ ಕೊಡಬೇಕು. ಒಂದು ವೇಳೆ ಮತದಾರರ ನಮೂನೆಯನ್ನು ಹಿಂದಿರುಗಿಸದೆ ಹೋದರೆ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗುತ್ತದೆ. ಮನೆಯಲ್ಲಿ ಇಲ್ಲದೆ ಹೊರಗಡೆ ಇರುವವರು ಆನ್‌ಲೈನ್ ಮೂಲಕ ಸಹ ಧೃಡೀಕರಿಸಿ ವಿವರ ಸಲ್ಲಿಸಬಹುದು ಎಂದು ಹೇಳಿದರು.

ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿವೆ. ಅಂತೆಯೇ 1,823 ಮತಗಟ್ಟೆ ಹಾಗೂ 15,62,916 ಮತದಾರರಿದ್ದಾರೆ. ವಿಶೇಷ ಸಮಗ್ರ ಪರಿಷ್ಕರಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಮತದಾರರ ನೋಂದಣಾಧಿಕಾರಿಗಳಾಗಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಮೀಕ್ಷೆ ಸುಗಮವಾಗಿ ನಡೆಸಲು ಬಿಎಲ್ಒ ಶಿಬಿರವನ್ನು 51 ಕಡೆ ಮಾಡಲಾಗುವುದು. ಹಾಗೂ 272 ವೋಟರ್ ಫ್ಯಾಸಿಲಿಟೇಷನ್ ಕ್ಯಾಂಪ್ ಆಯೋಜಿಸಲಾಗುವುದು. ಪ್ರತಿ ವರ್ಷ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಲಾಗುವುದು. 2002ರಲ್ಲಿ ಸಮಗ್ರ ಪರಿಷ್ಕರಣೆ ನಡೆಸಲಾಗಿತ್ತು. ವಿವಿಧ ಪಕ್ಷಗಳ ಮುಖಂಡರು ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಮತಗಟ್ಟೆಗಳ ಏಜೆಂಟರಿಗೆ ಮಾಹಿತಿಯನ್ನು ನೀಡಬೇಕು. 1,200 ಜನರಿಗಿಂತ ಹೆಚ್ಚು ಇರುವ ಮತಗಟ್ಟೆಗಳನ್ನು ವಿಭಾಗಿಸಿ ಹೆಚ್ಚುವರಿ ಮತಗಟ್ಟೆ ಸ್ಥಾಪನೆ ಮಾಡಲಾಗುವುದು. ಜಿಲ್ಲೆಯಲ್ಲಿ 100 ನೂತನ ಮತಗಟ್ಟೆಗಳನ್ನು ಸ್ಥಾಪನೆ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ವಿವರಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಅನೇಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಬರುತ್ತಾರೆ. ಪ್ರಸ್ತುತ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಎಲ್ಎಗಳ ಪಾತ್ರ ಬಹಳ ಮುಖ್ಯವಿದೆ. ವಿವಿಧ ಪಕ್ಷಗಳ ಮುಖಂಡರು ಪ್ರತಿ ಮತಗಟ್ಟೆಗೂ ಒಬ್ಬೊಬ್ಬ ಬಿಎಲ್ಎ ನೇಮಕ ಮಾಡಿ, ಯಾವ ರೀತಿ ಹೊಸ ಮತದಾರರನ್ನು ಪಟ್ಟಿಗೆ ಹೆಸರು ಸೇರಿಸಬೇಕು. ಹಾಗೂ ಅನರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬುದರ ಬಗ್ಗೆ ಬಿಎಲ್ಎಗಳಿಗೆ ತರಬೇತಿ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಮಂಡ್ಯ ತಹಸೀಲ್ದಾರ್ ವಿಶ್ವನಾಥ್, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ನವೀನ್, ಎಂ.ಡಿ.ರಮೇಶ್, ಶಿವಶಂಕರ್, ದಿನೇಶ್, ದಿನೇಶ್, ಅಶೋಕ್ ಇತರರಿದ್ದರು. ಇದೇ ವೇಳೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಯಾವ ರೀತಿಯಲ್ಲಿ ನಡೆಯುತ್ತದೆ ಎಂಬುದರ ಕುರಿತು ಉಲ್ಲೇಖಿಸಲಾಗಿರುವ ಕೈಪಿಡಿ ಪುಸ್ತಕವನ್ನು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net