

ಮಂಡ್ಯ: ವಾರಕ್ಕೊಂದು ವಾರ್ಡ್‌ನಂತೆ ಪ್ರತಿ ಮನೆ ಮನೆಗೆ ಹೋಗಿ ಇ-ಖಾತಾ ಅಭಿಯಾನ ಚುರುಕುಗೊಳಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇ-ಖಾತೆ ಕುರಿತು ಸಾರ್ವಜನಿಕರಲ್ಲಿ ಮಾಹಿತಿಯ ಕೊರತೆಯಿದೆ. ಆದ್ದರಿಂದ ಹೆಚ್ಚಿನ ಜಾಗೃತಿ ಮೂಡಿಸಿ. ಬಾಕಿಯಿರುವ ಇ-ಖಾತೆಗಳನ್ನು ವಾರಕ್ಕೊಂದು ವಾರ್ಡ್ ಎಂಬಂತೆ ಮನೆ ಮನೆಗೆ ತಲುಪಿಸಿ. ಇ -ಖಾತೆ ಮಾಡಿಸುವುದು ಕಡ್ಡಾಯವಾಗಿದ್ದು, ಅಧಿಕಾರಿಗಳು ನಿರೀಕ್ಷಿತ ಗುರಿ ತಲುಪದಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದು ಕಂಡು ಬಂದಿದ್ದು, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಲು ಕ್ರಮಕೈಗೊಳ್ಳಿ. ಜಿಲ್ಲೆಯಲ್ಲಿ ನಾಯಿ ಕಡಿತಕ್ಕೆ ಒಳಪಟ್ಟವರ ವರದಿ ತಯಾರಿಸಿ ಮಾಹಿತಿ ನೀಡಬೇಕು. ಕುಡಿಯುವ ನೀರಿನ ಶುದ್ಧತೆ ಬಹಳ ಮುಖ್ಯವಾಗಿದ್ದು, ಮಳೆ ಬಂದಂತಹ ಸಂದರ್ಭದಲ್ಲಿ ಕುಡಿಯುವ ನೀರಿನಲ್ಲಿ ಮಣ್ಣು ಮಿಶ್ರವಾಗಿರುವುದು ಬೆಳಕಿಗೆ ಬಂದಿದೆ. ಕುಡಿಯುವ ನೀರಿನ ಶುದ್ಧತೆಯ ಕಡೆಗೆ ಹೆಚ್ಚಿನ ನಿಗಾ ವಹಿಸಿ. ಇಂದಿರಾ ಕ್ಯಾಂಟೀನ್‌ನಲ್ಲಿ ಕುಡಿಯುವ ನೀರಿನ ಘಟಕದ ವ್ಯವಸ್ಥೆಯಲ್ಲಿ ಹಾಗೂ ಊಟದ ಸ್ವಚ್ಛತೆ ಬಗ್ಗೆ ಪ್ರತಿ ನಿತ್ಯ ಪರಿಶೀಲಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ವಸತಿ ರಹಿತರ ಪಟ್ಟಿ ತಯಾರಿಸಿ. ನಿವೇಶನಕ್ಕಾಗಿ ಸ್ಥಳ ಪರಿಶೀಲಿಸಿ ಮತ್ತು ಈಗಾಗಲೇ ಅನುಮೋದನೆ ಪಡೆದಿರುವ ವಸತಿ ನಿರ್ಮಾಣದಲ್ಲಿ ಬಾಕಿಯಿರುವ ಕೆಲಸವನ್ನು ಶೀಘ್ರದಲ್ಲಿ ಸಂಪೂರ್ಣಗೊಳಿಸಿ. ಕಡ್ಡಾಯವಾಗಿ ಪ್ರತಿ ಇಲಾಖೆ ಅಭಿವೃದ್ಧಿ ಕುರಿತು ಮಾಹಿತಿ ತಿಳಿಸಿ. ಪೌರ ಕಾರ್ಮಿಕರಿಗೆ ಸವಲತ್ತುಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು, ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ನೀಡಿ ಬಳಕೆ ಮಾಡಲು ತಿಳಿಸಬೇಕು. ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸುವಲ್ಲಿ ಕ್ರಮಕೈಗೊಳ್ಳಿ. ವಿಮೆ ಮತ್ತು ಇಎಸ್‌ಐ, ಪಿಎಫ್ ಸೌಲಭ್ಯದ ಜತೆಗೆ ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಬೇಕು. ಸಾರ್ವಜನಿಕ ಶೌಚಗೃಹದಲ್ಲಿ ಸ್ವಚ್ಛತೆ ಕಡೆಗೆ ಗಮನ ವಹಿಸಿ. ಕಸ ವಿಲೇವಾರಿಯಲ್ಲಿ ಸಮಸ್ಯೆ ಕಂಡುಬಡಿದ್ದು, ಒಣ ಕಸ, ಹಸಿಕಸ ಬೇರ್ಪಡಿಸುವಲ್ಲಿ ಮತ್ತು ಕಸ ಸಂಗ್ರಹ, ವಿಲೇವಾರಿಯಲ್ಲಿ ಶಿಸ್ತಿನಿಂದ ಕೆಲಸ ನಿರ್ವಹಿಸಿ ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ಪೌರಾಯುಕ್ತೆ ಯು.ಪಿ.ಪಂಪಾಶ್ರೀ, ಇಂಜಿನಿಯರ್‌ಗಳಾದ ರುದ್ರೇಗೌಡ, ಪ್ರತಾಪ್ ಇತರರಿದ್ದರು.