ಡೆಂಘೆ ಹರಡದಂತೆ ಹೆಚ್ಚಿನ ನಿಗಾ ವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Meeting on Dengue Control Mandya
Published on

ಮಂಡ್ಯ: ಡೆಂಘೆ ಜ್ವರಕ್ಕೆ ಸರಿಯಾದ ಚಿಕಿತ್ಸೆ ಪಡೆಯದಿದ್ದಲ್ಲಿ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಆದ್ದರಿಂದ ಜ್ವರ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡೆಂಘೆ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 415 ಡೆಂಘೆ ಜ್ವರ ಪ್ರಕರಣ ವರದಿಯಾಗಿದೆ. ಒಂದೇ ಸ್ಥಳದಲ್ಲಿ 2 ಅಥವಾ ಹೆಚ್ಚಿನ ಪ್ರಕರಣ ಕಂಡುಬಂದಲ್ಲಿ ತಕ್ಷಣ ಸುತ್ತ ಮುತ್ತ ಪ್ರದೇಶದಲ್ಲಿ ಕಡ್ಡಾಯವಾಗಿ ಲಾರ್ವಾ ಪರೀಕ್ಷೆ ನಡೆಸಿ ಎಂದರು.

ಡೆಂಘೆ ಪ್ರಕರಣಗಳಲ್ಲಿ ವಯಸ್ಸುವಾರು ಪಟ್ಟಿ ಮಾಡಿಕೊಂಡು ಮಕ್ಕಳಲ್ಲಿ ಹೆಚ್ಚು ಕಂಡುಬಂದಿದ್ದರೆ, ಅಂತಹ ಶಾಲೆ ಹಾಗೂ ಅಂಗನವಾಡಿಗೆ ಕಡ್ಡಾಯವಾಗಿ ಭೇಟಿ ನೀಡಿ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಿ. ತಾಲೂಕುಮಟ್ಟದಲ್ಲಿ ತಹಸೀಲ್ದಾರ್, ತಾಪಂ ಇಒ, ಟಿಎಚ್‌ಒ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಬಿಇಒ ಸಭೆ ನಡೆಸಿ ಜ್ವರ ತಡೆಗಟ್ಟುವ ಬಗ್ಗೆ ಯೋಜನೆ ರೂಪಿಸಿ ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿದಿನ ಶಾಲೆ ಹಾಗೂ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿ. ಆರೋಗ್ಯ ಇಲಾಖೆಯಿಂದ ಸಾರ್ವಜನಿಕರು ಹಾಗೂ ಮಕ್ಕಳು ಕೈಗೊಳ್ಳಬೇಕಿರುನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಿ ಅನುಸರಿಸುವಂತೆ ಪ್ರೇರೆಪಿಸಿ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಜ್ವರ ಹರಡುವ ಸೊಳ್ಳೆ ಕಡಿತವನ್ನು ತಪ್ಪಿಸಲು ಆದಷ್ಟು ಸಾರ್ವಜನಿಕರು ತುಂಬು ತೋಳಿನ ಉಡುಪು ಧರಿಸಿ, ಬೇವಿನ ಎಣ್ಣೆಯನ್ನು ಕೈ ಮತ್ತು ಕಾಲಿಗೆ ಹಚ್ಚಿಕೊಳ್ಳಿ. ಜ್ವರ ಬಂದ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆಗೆ ಒಳಪಡಬೇಕು ಎಂದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸ್ಿ ಮಾತನಾಡಿ, ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯಡಿ 18 ರಿಂದ 50 ವರ್ಷದೊಳಗಿನವರು ವಾರ್ಷಿಕವಾಗಿ 436 ರೂ ಪ್ರೀಮಿಯಂ ಪಾವತಿಸಬೇಕು. ಬಳಿಕ ಯಾವುದೇ ಕಾರಣಕ್ಕೂ ಮೃತಪಟ್ಟರೂ 2 ಲಕ್ಷ ರೂ ವಿಮೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವಾರ್ಷಿಕವಾಗಿ 20 ರೂ ಪ್ರೀಮಿಯಂ ಪಾವತಿಸಿದರೆ ಅಪಘಾತದಿಂದ ಮೃತಪಟ್ಟಲ್ಲಿ 2 ಲಕ್ಷ ರೂ ವಿಮೆ ದೊರೆಯಲಿದೆ. ಈ ಬಗ್ಗೆ ನೋಂದಾಯಿಸಿಕೊಳ್ಳುವಂತೆ ಪ್ರೇರೇಪಿಸಿ ಎಂದರು.

ಸಭೆಯಲ್ಲಿ ಮಂಡ್ಯ ಎಸಿ ಶಿವಮೂರ್ತಿ, ಪಾಂಡವಪುರ ಎಸಿ ನಂದೀಶ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net