

ಮಂಡ್ಯ: ಬೆಳೆ ಸಮೀಕ್ಷೆಯ ವರದಿಯನ್ನು ಆಧರಿಸಿ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ವಿಸ್ತೀರ್ಣ ಎಣಿಕೆ ಕಾರ್ಯ, ಎನ್‌ಡಿಆರ್‌ಎಫ್ ಸಹಾಯಧನ, ಪ್ರಕೃತಿ ವಿಕೋಪದಲ್ಲಿ ಬೆಳೆ ಹಾನಿ ವರದಿ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳೆ ಸಮೀಕ್ಷೆ ಕೆಲಸ ನಿಖರವಾಗಿರಬೇಕು. ಆದ್ದರಿಂದ ಸಮೀಕ್ಷೆ ಕೆಲಸಗಳನ್ನು ಚುರುಕುಗೊಳಿಸಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆ ಸಮೀಕ್ಷೆಯಲ್ಲಿ ನೀಡಿದ ಗುರಿ ತಲುಪದ ಪಿ.ಆರ್- ಪ್ರೈವೇಟ್ ರೆಸಿಡೇಂಟ್ಸ್ ಅವರನ್ನು ಬದಲಾವಣೆ ಮಾಡಿ ಹೊಸಬರನ್ನು ಆಯ್ಕೆ ಮಾಡಿಕೊಳ್ಳಿ. ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಶೇ.91.55ರಷ್ಟು ಪೂರ್ವ ಮುಂಗಾರು, ಶೇ.96.34ರಷ್ಟು ಮುಂಗಾರು, ಶೇ.97.68ರಷ್ಟು ಹಿಂಗಾರು ಹಾಗೂ ಶೇ.95.84ರಷ್ಟು ಬೇಸಿಗೆ ಹಂಗಾಮಿನಲ್ಲಿ ನಡೆದ ಸಮೀಕ್ಷೆಗಳಲ್ಲಿ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ ಕಳೆದ 3 ವರ್ಷದಿಂದ ಗಣನೀಯವಾಗಿ ಹೆಚ್ಚಿನ ಪ್ರದೇಶದಲ್ಲಿ ಬೆಳೆ ವಿಮೆ ನೋಂದಣಿಯಾಗಿದ್ದು, 2023-24ನೇ ಸಾಲಿನಲ್ಲಿ ವಿವಿಧ ವಿಮಾ ವಿಪತ್ತುಗಳಡಿ 39.09 ಕೋಟಿ ರೂ ಗಳಷ್ಟು ವಿಮಾ ಪರಿಹಾರ ಧನ ಪಾವತಿಯಾಗಿದೆ. 2025ರಲ್ಲಿ 3,708 ರೈತರು ವಿಮೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇನ್ನು ಹೆಚ್ವಿನ ಸಂಖ್ಯೆಯಲ್ಲಿ ರೈತರು ನೋಂದಾಯಿಸಿಕೊಳ್ಳುವಂತೆ ಪ್ರಚಾರ ನೀಡಿ ಎಂದರು.
ಬೆಳೆ ವಿಮಾ ಯೋಜನೆ ಕುರಿತು ಇಲಾಖಾ ರೈತ ಸಂಜೀವಿನಿ ವಾಹನ, ಆಟೋ ರಿಕ್ಷಾ, ಕಸ ವಿಲೇವಾರಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಜಿಂಗಲ್ಸ್ ಅಳವಡಿಸಲಾಗಿದೆ. ಹಾಲಿನ ಡೇರಿ, ಸೊಸೈಟಿ, ಸಂತೆ ಹಾಗೂ ಹೆಚ್ಚಿನ ರೈತರು ಸೇರುವ ಸ್ಥಳಗಳಲ್ಲಿ ನೇರವಾಗಿ ಸಂಪರ್ಕ ಮಾಡಿ ವಿಮಾ ನೋಂದಣಿ ಬಗ್ಗೆ ಮಾಹಿತಿ ನೀಡಿ. ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ (ಪಿ.ಎಂ.ಎಫ್. ಎಂ.ಇ) ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆವಿಗೆ 258 ರೈತ ಉದ್ದಿಮೆದಾರರಿಗೆ ಒಟ್ಟಾರೆ 65.45 ಕೋಟಿ ರೂಗಳಷ್ಟು ಸಾಲ ಹಾಗೂ 21.7 ಕೋಟಿ ರೂಗಳಷ್ಟು ಸಹಾಯಧನ ಮಂಜೂರು ಮಾಡಲಾಗಿದೆ. ಪಿಎಂಎಫ್‌ಎಂಇ ಯೋಜನೆಗೆ ಸದರಿ ಸಾಲಿನಲ್ಲಿ 250 ಗುರಿ ನಿಗದಿಯಾಗಿದ್ದು, ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ ತೋಟಗಾರಿಕೆ, ಮೀನುಗಾರಿಕೆ ಹಾಗೂ ಕೃಷಿ ಇಲಾಖೆಗಳು ಒಟ್ಟಿಗೆ ಸಭೆ ನಡೆಸಿ ಹೆಚ್ಚಿನ ಬೇಡಿಕೆ ಇರುವ ಕ್ಷೇತ್ರದಲ್ಲಿ ಯೋಜನೆ ಸಿದ್ಧಪಡಿಸಿ ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಆಹಾರ ಸಂಸ್ಕರಣೆಗೆ ಸಂಬಂದಿಸಿದಂತೆ ಎನ್‌ಆರ್‌ಎಲ್ಎಂ ಸ್ವಸಹಾಯ ಸಂಘಗಳಿಗೆ ದೇಸಿ ಎಣ್ಣೆ ಗಾಣ, ಮದ್ದೂರು ವಡೆ, ಚಿಪ್ಸ್ ತಯಾರಿಕೆ ಸೇರಿದಂತೆ ವಿವಿಧ ಘಟಕ ಪ್ರಾರಂಭಿಸಬಹುದು. ಯೋಜನೆ ಸಿದ್ಧಪಡಿಸಿದರೆ ನುರಿತ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜು.4ರಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆಸಲಿದ್ದು, ಈ ಸಂಬಂಧ ಅಧಿಕಾರಿಗಳು ಸಿದ್ಧಪಡಿಸಿರುವ ಅನುಪಾಲನ ವರದಿಯನ್ನು ಪರಿಶೀಲಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ ಇತರರಿದ್ದರು.