

ಗುರುಪುರ: ಬಂಟ ಸಮಾಜ ಮುಂದುವರಿದಿಲ್ಲ. ಅರ್ಧದಷ್ಟು ಬಂಟರು ಬಡವರಿದ್ದಾರೆ. ಎಲ್ಲ ಬಂಟ ಸಂಘಗಳು ಶ್ರೀಮಂತವಾಗಿದ್ದು, ಬಡವರಿಗೆ ಮತ್ತು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ನೆರವಾಗಲು ಸಮೀಕ್ಷೆ ನಡೆಸಬೇಕು. ಸಂಘಗಳು ನೀಡುವ ನೆರವು ದುರುಪಯೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಬೆಂಗಳೂರಿನ ಡಿವೈಎಸ್ಪಿ ದಿನಕರ ಶೆಟ್ಟಿ ಪಡ್ರೆ ಹೇಳಿದರು.
ಸುರತ್ಕಲ್ ಬಂಟರ ಭವನದಲ್ಲಿ ಸುರತ್ಕಲ್ ಬಂಟರ ಸಂಘದ 25ನೇ ವಾರ್ಷಿಕ ಮಹಾಸಭೆ, ಅಭಿನಂದನೆ, ಆರ್ಥಿಕ ನೆರವು ಮತ್ತು ವಿದ್ಯಾರ್ಥಿವೇತನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಉದ್ಯಮಿ ಡಾ.ಕನ್ಯಾನ ಸದಾಶಿವ ಶೆಟ್ಟಿ, ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಗ್ಗಿ ಸುಧಾಕರ ಮಾತನಾಡಿದರು.
ಸಂಘದ ಮಾಜಿ ಅಧ್ಯಕ್ಷ ಸುಧಾಕರ ಎಸ್.ಪೂಂಜ, ನೂತನ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಟುಂಬೂರು, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಪದಾಧಿಕಾರಿಗಳಾದ ಸುಜೀರ್ ಶೆಟ್ಟಿ, ಶಿಶಿರ್ ಶೆಟ್ಟಿ, ಪುಷ್ಪರಾಜ ಶೆಟ್ಟಿ ಮಧ್ಯ, ಜಯರಾಮ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಭವ್ಯಾ ಎ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನಾನಾ ಕ್ಷೇತ್ರದ ಸಾಧಕರಿಗೆ ಅಭಿನಂದನೆ, ವಿದ್ಯಾರ್ಥಿಗಳಿಗೆ ದತ್ತಿನಿಧಿ ನೆರವು ವಿತರಣೆ, ಸಂಘದ ವ್ಯಾಪ್ತಿಯ ಸಮುದಾಯದ ಹಾಗೂ ಬೇರೆ ಸಮುದಾಯದ 80 ವಿದ್ಯಾರ್ಥಿಗಳಿಗೆ 1.67 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು. ವಿಕಲಾಂಗರಿಗೆ ಸಹಾಯ ಹಸ್ತಾಂತರಿಸಲಾಯಿತು. ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ವರಿ ಡಿ.ಶೆಟ್ಟಿ ಮತ್ತು ಡಾ.ಸುಧಾ ಸಿ.ಶೆಟ್ಟಿ ನಿರೂಪಿಸಿದದರು. ಪುಷ್ಪರಾಜ ಶೆಟ್ಟಿ ಕುಡುಂಬೂರು ವಂದಿಸಿದರು.