

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ದೇಶದ ಭವಿಷ್ಯಕ್ಕಾಗಿ, ರಕ್ಷಣೆ ಹಾಗೂ ಧರ್ಮ ರಕ್ಷಣೆಗಾಗಿ ಬಿಜೆಪಿ 3ನೇ ಬಾರಿ ಗೆಲುವು ಸಾಧಿಸುವುದರೊಂದಿಗೆ ವಿಶ್ವನಾಯಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ಮಾಜಿ ಸಚಿವ ಕೆ.ಸುಧಾಕರ್ ಹೇಳಿದರು.
ಪಟ್ಟಣದ ಗಾರೆರವಿ ಬಡಾವಣೆಯಲ್ಲಿ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ದೇವನಹಳ್ಳಿ ಮಂಡಲದ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ಲೋಕಸಮರಕ್ಕೆ ಎರಡು ತಿಂಗಳಷ್ಟೇ ಬಾಕಿ ಇದ್ದು, ಈ ಬಾರಿ ಹಿಂದೆಂದಿಗಿಂತಲೂ ಅತಿ ಹೆಚ್ಚು ಸ್ಥಾನ ಗೆದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ 400 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರೇ ಹೇಳುತ್ತಿದ್ದಾರೆ. ಆದರೆ, ಅದಕ್ಕೆ ಪೂರಕವಾಗಿ ನಾವು ರಾಜ್ಯದಲ್ಲಿ ಹಿಂದಿನ ಚುನಾವಣೆಯಂತೆ ಚಿಕ್ಕಬಳ್ಳಾಪುರ ಕ್ಷೇತ್ರ ಸೇರಿ ಎಲ್ಲ 28 ಕ್ಷೇತ್ರಗಳ ಗೆಲುವಿಗೆ ಶ್ರಮಿಸಬೇಕಿದೆ ಎಂದರು.
ದೇವನಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ 70 ಶಕ್ತಿ ಕೇಂದ್ರಗಳು ಹಾಗೂ 292 ಮತಗಟ್ಟೆಗಳಿದ್ದು, ಕಳೆದ ಚುನಾವಣೆಯಲ್ಲಿ 35 ಸಾವಿರ ಮತಗಳು ಬಂದಿದ್ದು, ಈ ಬಾರಿ ಮೂರು ಪಟ್ಟು ಹೆಚ್ಚಾಗಬೇಕು ಎಂದರು.
ಲೋಕಸಭಾ ಕ್ಷೇತ್ರ ಉಸ್ತುವಾರಿ ಕಟ್ಟಾ ಸುಬ್ರಮಣ್ಯ ನಾಯ್ಡು ಮಾತನಾಡಿ, ದೇಶವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡಿದವರು ಮೋದಿ. ವಿಶ್ವದ ಯಾವುದೇ ದೇಶಕ್ಕೆ ಹೋದರೂ ನಾವು ಭಾರತದವರು ಎಂದರೆ ವಿಶೇಷ ಗೌರವ ನೀಡುತ್ತಾರೆ. ಇದಕ್ಕೆ ಮೋದಿಯೇ ಕಾರಣ. ಅವರ ಕೈ ಬಲಪಡಿಸಲು ನಾವು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬೂತ್‌ಮಟ್ಟದಲ್ಲಿ ಪ್ರಾಮಾಣಿಕ 10 ಸಂಚಾಲಕರನ್ನು ನೇಮಿಸಿ ಹಿಂದಿನ ಚುನಾವಣೆಯಲ್ಲಿ ಯಾವ ಬೂತ್‌ನಲ್ಲಿ ಕಡಿಮೆ ಮತ ಬಂದಿದೆ ಅಲ್ಲಿ ಮುಂದೆ ಏನು ಮಾಡಬೇಕು ಎಂಬ ನಿರ್ದೇಶನ ನೀಡಿ ಎಂದರು.