ಯುವನಿಧಿ ಪ್ಲಸ್ ಸದುಪಯೋಗಪಡೆದುಕೊಳ್ಳಿ: ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಸಲಹೆ

Meeting of the Guarantee Scheme Implementation Authority Mandya
Published on

ಮಂಡ್ಯ: ಯುವನಿಧಿ ಯೋಜನೆಯಡಿ ನೋಂದಣಿಗೊಂಡ ಫಲಾನುಭವಿಗಳಿಗೆ ವಿವಿಧ ಕೌಶಲ ತರಬೇತಿ ನೀಡಿ ಉದ್ಯೋಗ ಕಲ್ಪಿಸಿ ಕೊಡುವ ಉದ್ದೇಶದಿಂದ ಸರ್ಕಾರ ಯುವನಿಧಿ ಪ್ಲಸ್ ಯೋಜನೆ ಜಾರಿಗೆ ತಂದಿದೆ. ಇದನ್ನು ಯುವ ಜನತೆ ಸದುಪಯೋಗ ಪಡೆದುಕೊಳ್ಳಿ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವನಿಧಿ ಪ್ಲಸ್ ಯೋಜನೆಯ ಬಗ್ಗೆ ಫಲಾನುಭವಿಗಳು ನಿರ್ಲಕ್ಷೃ ತೋರುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಫಲಾನುಭವಿಗಳ ಆಸಕ್ತಿಗೆ ಅನುಗುಣವಾಗಿ ಯುವನಿಧಿ ಪ್ಲಸ್ ಯೋಜನೆಯಡಿ ಕೌಶಲ ತರಬೇತಿ ನೀಡಲಾಗುತ್ತದೆ. ಆದ್ದರಿಂದ ಯುವಜನತೆಗೆ ತಪ್ಪು ಕಲ್ಪನೆ ಬೇಡ ಎಂದು ತಿಳಿ ಹೇಳಿದರು.

ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಡ ಕುಟುಂಬಗಳಿಗೆ ಬಹಳ ಅನುಕೂಲವಾಗುತ್ತಿದೆ. ಆದರೆ, ಕೆಲವು ಅನುಕೂಲಸ್ಥರು ಅಕ್ಕಿಯನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಸರ್ಕಾರದಿಂದ ನೀಡುವ ಅಕ್ಕಿಯನ್ನು ಮಾರಾಟಮಾಡುವುದು ಕಾನೂನು ಬಾಹಿರ ಎಂದು ಎಚ್ಚರಿಸಿದ ಅವರು, ಗೃಹಲಕ್ಷ್ಮೀ ಯೋಜನೆಯ ಸಮಸ್ಯೆ ಪರಿಹಾರವಾದರೆ ಗ್ಯಾರಂಟಿ ಯೋಜನೆಯ ಶೇ.80ರಷ್ಟು ಸಮಸ್ಯೆ ಬಗೆಹರಿದಂತಾಗುತ್ತದೆ. ಈ ನಿಟ್ಟಿನಲ್ಲಿ ಯೋಜನೆಯ ಸಹಾಯಧನ ಬಡ ಕುಟುಂಬಗಳಿಗೆ ತಲುಪಿಸಲು ಹೆಚ್ಚು ಒತ್ತು ನೀಡಿ ಎಂದರು.

ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಧನುಷ್, ಪ್ರಾಧಿಕಾರದ ಉಪಾಧ್ಯಕ್ಷ ಶಿವಣ್ಣ, ಸದಸ್ಯರಾದ ಕುಮಾರ, ರುದ್ರಪ್ಪ, ಶಂಕರೇಗೌಡ, ಮಹಮ್ಮದ್ ಅನ್ಸರ್, ಬಸವರಾಜು, ರಮೇಶ್, ಮಾದೇಶ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಪ್ರತೀಕ್ ಹೆಗ್ಡೆ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ನವೀನ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net