

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಸಾರ್ವಜನಿಕರಿಗೆ ಸಿಗಬೇಕಾದ ಕೆಲಸ-ಕಾರ್ಯಗಳನ್ನು ಸುಗಮವಾಗಿ ಹಾಗೂ ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಿ, ತಾಲೂಕು ಆಡಳಿತ ಚುರುಕಾಗಿ ಕೆಲಸ ಮಾಡಬೇಕಿದ್ದು, ಪ್ರತಿ ತಿಂಗಳ ಮೊದಲ ವಾರದಲ್ಲಿಯೇ ವಿಷಯಾವಾರು ಪ್ರಗತಿ ಪರಿಶೀಲನೆ ನಡೆಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ವಿಷಯ ವಿಲೇವಾರಿಗಳ ಬಗ್ಗೆ ಹಮ್ಮಿಕೊಂಡಿದ್ದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸರ್ಕಾರಿ ಜಮೀನುಗಳ ಪೋಡಿ ದುರಸ್ಥಿ, ಪಹಣಿ ಕಾಲಂ-3 ಮತ್ತು 9ರ ತಾಳೆ ಮಾಡುವುದು, ಬಗರ್ ಹುಕ್ಕುಂ ಪ್ರಗತಿ, ಸರ್ಕಾರಿ ಜಮೀನು ಒತ್ತುವರಿ ಗುರುತಿಸುವುದು ಹಾಗೂ ತೆರವಿಗೆ ಕ್ರಮ ಕೈಗೊಳ್ಳುವುದು. ರೈತರ ಜಮೀನುಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದು, ಸಾರ್ವಜನಿಕ ಅರ್ಜಿ ನಿಗದಿತ ಸಮಯದಲ್ಲಿ ವಿಲೇವಾರಿ ಮಾಡುವುದು, ಮೌಲ್ಯಯುತ ಸರ್ಕಾರಿ ಜಮೀನುಗಳನ್ನು ಗುರುತಿಸಿ, ತಂತಿ ಬೇಲಿ ನಿರ್ಮಾಣ ಮಾಡುವುದು, ಸಕಾಲದಲ್ಲಿ ಆನ್‌ಲೈನ್ ಸೇವೆಗಳ ಮೂಲಕ ವಿಲೇವಾರಿ ಹೀಗೆ ಹಲವು ಸಾರ್ವಜನಿಕ ಸೇವೆಗಳನ್ನು ನಿಗದಿತ ಸಮಯದಲ್ಲಿ ಸಂಪೂರ್ಣಗೊಳಿಸಿ, ಆಡಳಿತ ಯಂತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲದ ರೀತಿ ಅಧಿಕಾರಿಗಳು ನೆಡೆದುಕೊಳ್ಳುವ ಮೂಲಕ ಗುರಿ ತಲುಪಲು ಮಾರ್ಗೋಪಾಯಗಳನ್ನು ತಿಳಿಸಿದರು.
ಪ್ರತಿ ತಿಂಗಳ ಪ್ರಗತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಕರೆದು ಸಮಸ್ಯೆ ಬಗೆಹರಿಸಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿ, ವರದಿ ಕಳುಹಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸಂಗಪ್ಪ, ಭೂ ದಾಖಲೆಗಳ ಉಪನಿರ್ದೇಶಕ ಸಂತೋಷ್, ತಹಸೀಲ್ದಾರ್ ಎಂ.ವಿಜಯ್ ಕುಮಾರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಂತೋಷ್ ಇದ್ದರು.