

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾ ಜನತಾದರ್ಶನ ಸೇರಿ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಸ್ವೀಕೃತಿಯಾಗಿರುವ ಅರ್ಜಿಗಳಿಗೆ ಆದ್ಯತೆ ನೀಡಿ ಕಾಲ ಮಿತಿಯೊಳಗೆ ಅರ್ಜಿಗಳನ್ನು ವಿಲೇ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಸೂಚಿಸಿದರು.
ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸಕಾಲದಲ್ಲಿ ಬಾಕಿ ಇರುವ ಅರ್ಜಿಗಳನ್ನು ಅವಧಿ ಮೀರದಂತೆ ತ್ವರಿತವಾಗಿ ಬಗೆಹರಿಸಲು ಕ್ರಮವಹಿಸಬೇಕು, ಕಾಲಮಿತಿಯೊಳಗೆ ಬಗೆಹರಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು. ಸರ್ಕಾರಿ ಸ್ಮಶಾನ ಜಾಗ ಒತ್ತುವರಿ ಸಮಸ್ಯೆ, ಸಂಪರ್ಕ ರಸ್ತೆ ಸಮಸ್ಯೆಗಳ ಬಗ್ಗೆ ದೂರು ಬಂದಲ್ಲಿ ಆದ್ಯತೆ ಮೇರೆಗೆ ಶೀಘ್ರ ಬಗೆಹರಿಸಲು ತಾಲೂಕು ತಹಸೀಲ್ದಾರ್‌ಗಳು ಕ್ರಮ ಕೈಗೊಳ್ಳಬೇಕು.ಆಶ್ರಯ ಯೋಜನೆಗೆ ಗುರುತಿಸಿರುವ ಸ್ಥಳಗಳನ್ನು ಶೀಘ್ರ ಸರ್ವೆ ಮಾಡಿಸಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲೆಯ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಮುಂದಾಗಬೇಕು ಎಂದು ತಾಕೀತು ಮಾಡಿದರು.
ಒತ್ತುವರಿ ತೆರವುಗೊಳಿಸಿ:ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಂಬಂಧಿಸಿದಂತೆ ವಿಲೇವಾರಿ ಘಟಕಗಳ ಜಮೀನು ಮಂಜೂರಾತಿಗೆ ಕ್ರಮವಹಿಸಲು ಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕುವಾರು ಮತ್ತು ಇಲಾಖಾವಾರು ಕೆರೆಗಳ ಮಾಹಿತಿ ಪಡೆದು ಕೆರೆ ಒತ್ತುವರಿ ತೆರವುಗೊಳಿಸಲು ಶೀಘ್ರ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಫ್ರೂಟ್ಸ್ ತಂತ್ರಾಂಶದಡಿ ನೋಂದಣಿ ಮಾಡಿಸಿ:ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ವಿತರಿಸಲು, ಬೆಂಬಲ ಬೆಲೆ ಯೋಜನೆಯಲ್ಲಿ ಕೃಷಿ ಉತ್ಪನ್ನ ಖರೀದಿಸಲು, ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆಯಲು, ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಇತರೆ ಇಲಾಖೆಗಳಲ್ಲಿ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ರೈತರು ಕಡ್ಡಾಯವಾಗಿ ತಮ್ಮ ಎಲ್ಲ ಜಮೀನುಗಳ ವಿವರಗಳನ್ನು ಫೂಟ್ಸ್ ತಂತ್ರಾಂಶದಡಿ ಡಿ.11ರೊಳಗೆ ನೋಂದಾಯಿಸಿಕೊಳ್ಳಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಯುವ ಮತದಾರರ ನೋಂದಣಿಗೆ ಕ್ರಮ:ಚುನಾವಣಾ ಹಿನ್ನೆಲೆಯಲ್ಲಿ ಯುವ ಮತದಾರರ ನೋಂದಣಿ ಹೆಚ್ಚಳಕ್ಕೆ ಮತ್ತು ಪದವೀಧರರ ನೋಂದಣಿಗೆ ಕ್ರಮ ವಹಿಸಿ ಸ್ವೀಪ್ ಸಮಿತಿಯ ಮೂಲಕ ಜಾಗೃತಿ ಮೂಡಿಸಲು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿವಶಂಕರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.