ಪಂಚಮಸಾಲಿ ಸ್ವಾಮೀಜಿಗಳ ಪರ್ಯಾಯ ಒಕ್ಕೂಟ; ಜಮಖಂಡಿಯಲ್ಲಿ 30ಕ್ಕೂ ಹೆಚ್ಚು ಸ್ವಾಮೀಜಿಗಳ ಸಭೆ

P Sali
ಪಂಚಮಸಾಲಿ ಸಮಾಜದ ವಿವಿಧ ಸ್ವಾಮೀಜಿಗಳು ಸೇರಿ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಹೆಸರಿನಲ್ಲಿ ನಡೆಸಿದ ಸಭೆ.
Published on

ಬಾಗಲಕೋಟೆ: ರಾಜ್ಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ 70ಕ್ಕೂ ಹೆಚ್ಚು ಮಠಾಧಿಪತಿಗಳು ಸಮಾನಮನಸ್ಕ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟವನ್ನು ರಚನೆ ಮಾಡಿರುವುದಾಗಿ ಘೊಷಿಸಿದ್ದಾರೆ. ಮಂಗಳವಾರ ಜಮಖಂಡಿ ನಗರದ ಸಮಾಜದ ಪ್ರಮುಖರೊಬ್ಬರ ನಿವಾಸದಲ್ಲಿ ರಾಜ್ಯದ 30ಕ್ಕೂ ಹೆಚ್ಚು ಪಂಚಮಸಾಲಿ ಸ್ವಾಮೀಜಿಗಳು ಸುದೀರ್ಘ ಸಭೆ ನಡೆಸಿದ್ದು, ಒಕ್ಕೂಟದಿಂದ ಸಮಾಜದ ಒಳಿತಿಗಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಹರಿಹರ ಮತ್ತು ಕೂಡಲಸಂಗಮದಲ್ಲಿ ಇರುವ ಲಿಂಗಾಯತ ಪಂಚಮಸಾಲಿ ಪೀಠಗಳ ಸ್ವಾಮೀಜಿಗಳನ್ನು ಸಭೆಗೆ ಆಹ್ವಾನಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ‘ಒಕ್ಕೂಟದಿಂದ ನಾವು ಯಾರನ್ನೂ ಆಹ್ವಾನಿಸಲ್ಲ. ಎಲ್ಲರೂ ಒಬ್ಬರಿಗೊಬ್ಬರು ಸಂರ್ಪಸಿ ಸಭೆಗೆ ಬಂದಿದ್ದೇವೆ’ ಎಂದು ಸ್ವಾಮೀಜಿಗಳ ಪರವಾಗಿ ನಿಲೋಗಿ ಶಿವಾನಂದೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದರು.

ಮುಖ್ಯವಾಗಿ ನಮ್ಮ ಒಕ್ಕೂಟದಲ್ಲಿ ಗುರು ಪರಂಪರೆ, ವಿರಕ್ತ ಪರಂಪರೆ, ಆರೂಢ, ಶಿವಾನಂದ ಪರಂಪರೆ ಇರುವ ಮಠಗಳಿದ್ದು, ರಾಜ್ಯಾದ್ಯಂತ ಪಂಚಮಸಾಲಿ ಸಮಾಜದ 80ಕ್ಕೂ ಅಧಿಕ ಮಠಾಧೀಶರಿದ್ದಾರೆ. ಅವರೆಲ್ಲರೂ ಸೇರಿ ಒಕ್ಕೂಟ ರಚನೆ ಮಾಡಿದ್ದಾಗಿ ಸಭೆಯಲ್ಲಿ ತಿಳಿಸಿದರು. ಈ ಒಕ್ಕೂಟದಲ್ಲಿ ಎಲ್ಲ ಮಠಾಧೀಶರೂ ಸಮಾನರು. ದೊಡ್ಡವರು, ಸಣ್ಣವರು ಎನ್ನುವ ವ್ಯತ್ಯಾಸ ಇರಲ್ಲ. ನಾವೆಲ್ಲ ಸಾಮಾನ್ಯ, ಜನಸಾಮಾನ್ಯರ ಸ್ವಾಮೀಜಿಗಳಾಗಿದ್ದು, ಜಗದ್ಗುರು ಎನ್ನುವ ಪಟ್ಟ ಇರುವವರಿಗೆ ಇಲ್ಲಿ ಅವಕಾಶವಿಲ್ಲ. ಜಗದ್ಗುರು ಪದ ಬಿಟ್ಟು ಬರುವುದಾದರೆ ಸ್ವಾಗತಿಸುತ್ತೇವೆ ಎಂದು ಸ್ವಾಮೀಜಿಗಳು ಸ್ಪಷ್ಟಪಡಿಸಿದರು. ರಾಜಕೀಯ ನಮ್ಮ ಒಕ್ಕೂಟದ ಉದ್ದೇಶವಲ್ಲ. ನಮ್ಮದು ಸಮಾಜದ ಅಭಿವೃದ್ಧಿ ಮಾತ್ರ. ಸಮಾಜದ ಮಕ್ಕಳಲ್ಲಿ ಧಾರ್ವಿುಕ ಸಂಸ್ಕಾರ, ಪರಂಪರೆ, ಲಿಂಗಪೂಜೆ, ಬಡ ಮಕ್ಕಳಿಗೆ ಉಚಿತ ಪ್ರಸಾದ ನಿಲಯ ಇಂಥ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.

ಎರಡು ಪೀಠಗಳಿಂದ ಸಮಾಜಕ್ಕೆ ಒಳಿತಾಗಿಲ್ಲ: ಸಭೆಯಲ್ಲಿ ಬಬಲೇಶ್ವರ ಬೃಹನ್ಮಠದ ಮಹಾದೇವ ಸ್ವಾಮೀಜಿ ಮಾತನಾಡಿ, ‘ರಾಜ್ಯದಲ್ಲಿ ಈಗ ಇರುವ ಪಂಚಮಸಾಲಿ ಸಮಾಜದ ಎರಡು ಪೀಠಗಳಿಂದ ಸಮಾಜಕ್ಕೆ ಪ್ರಯೋಜನ ಆಗಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಒಬ್ಬರು ಸಾಮೂಹಿಕ ವಿವಾಹ ಅಂತ ಹೊರಟಿದ್ದಾರೆ. ಮತ್ತೊಬ್ಬರು ಬರೀ ಹೋರಾಟ ಅಂತಿದ್ದಾರೆ. ಹೀಗಾಗಿ ಸಮಾಜದ ಎಲ್ಲ ಸಣ್ಣಪುಟ್ಟ ಸ್ವಾಮೀಜಿಗಳು ಸೇರಿ ಸಂಘಟನೆ ಮಾಡಲು ಮುಂದಾಗಿದ್ದೇವೆ. ಇದು ಪಂಚಮಸಾಲಿ ಸಮಾಜದಲ್ಲಿ ಮೂರನೇ ಶಕ್ತಿಯಾಗಿ ಬೆಳೆಯಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ’ ಎಂದರು.

ಕಕಮರಿಯ ರಾಯಲಿಂಗೇಶ್ವರ ಮಠದ ಅಭಿನವ ಗುರು-ಲಿಂಗ-ಜಂಗಮ ಸ್ವಾಮೀಜಿ, ಆಲಗೂರ ದರಿದೇವರ ಮಠದ ಶಾಂತಮೂರ್ತಿ ಲಕ್ಷ್ಮಣ ಮುತ್ತಯ, ವಿಜಯಪುರದ ಸಿದ್ದಶ್ರೀ ಅದ್ವೈತಾಶ್ರಮದ ಸಂಗಮೇಶ್ವರ ಶರಣರು, ಕಾಜಿಬೀಳಗಿಯ ಚಿನ್ಮಯನಂದ ಸ್ವಾಮೀಜಿ, ಕುಳಲಿಯ ಸದ್ಗುರು ಗುರುನಾಥರೂಢ ಮಠದ ಸಿದ್ದಾರೂಢ ಸ್ವಾಮೀಜಿ, ಸಿಂದಗಿ ತಾಲೂಕಿನ ಹಿಕ್ಕಿನಗುತ್ತಿಯ ಪ್ರಭುಲಿಂಗ ಶರಣರು, ಅಥರ್ಗಾದ ಅಕ್ಕಮಹಾದೇವಿ ಸಂಸ್ಥಾನ ಮಠದ ಮಾತಾ ವಚನಶ್ರೀ ಸೇರಿದಂತೆ 30ಕ್ಕೂ ಹೆಚ್ಚು ಮಠಾಧೀಶರು, ಶರಣರು, ಮಾತೆಯರು ಸಭೆಯಲ್ಲಿ ಉಪಸ್ಥಿತರಿದ್ದರು.

ನಮ್ಮ ಒಕ್ಕೂಟ ಯಾರ ವಿರುದ್ಧವೂ ಅಲ್ಲ. ನಮ್ಮ ಪಂಚಮಸಾಲಿ ಸಮಾಜದ ಬೆಳವಣಿಗೆಗಾಗಿ ರಾಜ್ಯದಲ್ಲಿ ಇರುವ ಎಲ್ಲ ಪಂಚಮಸಾಲಿ ಮಠಾಧೀಶರು ಸೇರಿ ಮಾಡಿರುವಂತಹದ್ದು. ಎಲ್ಲ ಸಮಾನ ಮನಸ್ಕರಿಗೂ ಒಕ್ಕೂಟ ಸೇರಲು ಅವಕಾಶ ಇದೆ. ಆದರೆ, ಸಮಾನತೆ ಭಾವನೆ ಇರಬೇಕು. ಸಮಾಜದ ನೊಂದು, ಬೆಂದವರ ಪರವಾಗಿ ಕೆಲಸ ಮಾಡಬೇಕು.

| ಸಿದ್ದಲಿಂಗ ಸ್ವಾಮೀಜಿ ಶಿವಾನಂದೇಶ್ವರ ಮಠ, ನಿಲೋಗಿ

ಜಮಖಂಡಿ ನಗರದಲ್ಲಿ ಪಂಚಮಸಾಲಿ ಸಮಾಜದ ಸ್ವಾಮೀಜಿಗಳ ಒಕ್ಕೂಟದ ಹೆಸರಿನಲ್ಲಿ ಸಭೆ ನಡೆಸಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಪ್ರಾಮಾಣಿಕವಾಗಿ ಯಾರೇ ಸೇವೆ ಮಾಡಿದರೂ ಸಮಾಜಕ್ಕೆ ಒಳ್ಳೆಯದಾಗಲಿ. ಸಭೆಯ ಮಾಹಿತಿ ಗೊತ್ತಿಲ್ಲ. ಆದರೂ ಈ ಬಗ್ಗೆ ಅವರನ್ನು ಕೇಳಿ ಮುಂದಿನ ವಿಚಾರ ತಿಳಿಸುತ್ತೇವೆ.

| ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಪೀಠ, ಕೂಡಲಸಂಗಮ

ನಮ್ಮ ಪಂಚಮಸಾಲಿ ಸಮಾಜದವರಿಗೆ ನ್ಯಾಯ, ಮಾರ್ಗದರ್ಶನ ಸಿಗುತ್ತಿಲ್ಲ. ಕೆಲವರು ಶ್ರೀಮಂತರ ಹಿಂದೆ ಇದ್ದಾರೆ. ಶ್ರೀಸಾಮಾನ್ಯರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಒಕ್ಕೂಟದ ಸ್ವಾಮೀಜಿಗಳ ನೇತೃತ್ವದಲ್ಲಿ ನಾವೆಲ್ಲ ಕೆಲಸ ಮಾಡುತ್ತೇವೆ. ಪ್ರಭಾವಿಗಳು ಹಾಗೂ ರಾಜಕಾರಣಿಗಳಿಗೆ ಸಾಕಷ್ಟು ಮಠಗಳು ಇವೆ. ನಮ್ಮ ಒಕ್ಕೂಟ ಸಮಾನಮನಸ್ಕರಿಗೆ ಮಾತ್ರ. ಯಾರನ್ನೂ ಆಹ್ವಾನಿಸುವುದಿಲ್ಲ. ಅವರಾಗಿಯೇ ಬರಬೇಕು.

| ಕಿಶೋರಿ ಬೂದನೂರು ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net