

ಮಂಡ್ಯ: ಪರಿಶಿಷ್ಟ ಸಮುದಾಯದ ಜನರು ಪಕ್ಷಭೇದ ಮರೆತು ಸಂಘಟನೆ ಮಾಡೋಣ ಎಂದು ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷರೂ ಆದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಕರೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಮಹಾಸಭಾದ ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯದ ಜನತೆ ಒಗ್ಗೂಡಿದರೆ ಬಲ ತರಲಿದೆ. ಮಹಾಸಭಾದ ನಿರಂತರ ಶ್ರಮದ ಫಲವಾಗಿ ಹಲವರಿಗೆ ಸೂಕ್ತ ಸ್ಥಾನಮಾನ, ಗೌರವ ಸಂದಿದೆ. ಅಂತವರು ಇತ್ತ ಗಮನ ಹರಿಸಬಹುದಾಗಿತ್ತು. ಅದೇನು ಕಷ್ಟಕರ ವಿಚಾರವಾಗಿರಲಿಲ್ಲ. ಆದರೂ ಸಹ ಬೆಂಗಳೂರು ಸೇರಿ ರಾಜ್ಯದ ಆರೇಳು ಕಡೆ ಕಲ್ಯಾಣ ಮಂಟಪ ನಿರ್ಮಾಣ ಮಾಡಿದೆ. ಈ ಮಧ್ಯೆ ಸಂಘಟನೆಯಲ್ಲಿ ತೊಡಕು ಉಂಟಾಗಿತ್ತು. ಇದೀಗ ಎಲ್ಲವೂ ಸುಗಮವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸಮಾವೇಶವನ್ನು ಸಂಘಟಿಸಲಾಗುವುದು. ಸುಮಾರು ಮೂರು ನಾಲ್ಕು ಲಕ್ಷ ಜನರನ್ನು ಸೇರಿಸಿ ಅಧಿಕಾರದಲ್ಲಿರುವ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲನಾಯಕರನ್ನ ಆಹ್ವಾನಿಸಿ ಯಶಸ್ವಿಗೆ ಶ್ರಮವಹಿಸಲಾಗುವುದು. ಇದಕ್ಕೆ ಮಹಾಸಭಾದ ಎಲ್ಲರೂ ಸನ್ನದ್ಧರಾಗಿರಬೇಕು ಎಂದು ಹೇಳಿದರು.
ಪದಾಧಿಕಾರಿಗಳಾದ ನರಸಿಂಹಮೂರ್ತಿ, ಸುರೇಶ್, ನಾರಾಯಣಸ್ವಾಮಿ, ಶ್ರೀನಿವಾಸ್‌ಮೂರ್ತಿ, ರಾಜಣ್ಣ, ಪುಟ್ಟಯ್ಯ, ರಂಗರಾಜು, ಆನಂದ್‌ಕುಮಾರ್, ಮೀನಾಕ್ಷಿ, ಸುನಂದಮ್ಮ, ಚೈತ್ರಾ, ಕಮಲಮ್ಮ ಇತರರಿದ್ದರು.