

ವಿಜಯಾಣಿ ಸುದ್ದಿಜಾಲ ಬೆಳ್ತಂಗಡಿ
ಪರಿಶಿಷ್ಟ ಜಾತಿ ಪಂಗಡಗಳ ಮುಂದಾಳುಗಳ ಸಭೆ ತಹಸೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ಸೋಮವಾರ ನಡೆಯಿತು. ಸರ್ಕಾರ ಪರಿಶಿಷ್ಟ ಜಾತಿ ಪಂಗಡದ ಗುತ್ತಿಗೆದಾರರಿಗೆ ಶೇ.25ರಷ್ಟು ಮೀಸಲಾತಿ ನೀಡಿದ್ದರೂ ಅದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಪರಿಶೀಲನೆ ನಡೆಸಬೇಕು ಹಾಗೂ ಈ ಸಮುದಾಯಗಳಿಂದ ಬಂದಿರುವ ಗುತ್ತಿಗೆದಾರರಿಗೆ ನ್ಯಾಯ ಒದಗಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಜಿ.ಪಂ ಮಾಜಿ ಸದಸ್ಯ ಶೇಖರ ಕುಕ್ಕೇಡಿ ಬೆಳ್ತಂಗಡಿ ತಾಲೂಕಿನಲ್ಲಿ ವ್ಯವಸ್ಥಿತವಾಗಿ ಪರಿಶಿಷ್ಟ ಜಾತಿ ಪಂಗಡದ ಗುತ್ತಿಗೆದಾರರನ್ನು ವಂಚಿಸಲಾಗುತ್ತಿದೆ. ಡಮ್ಮಿ ಗುತ್ತಿಗೆದಾರರನ್ನು ಸೃಷ್ಟಿಸಿ ಆ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಪರಿಶಿಷ್ಟ ಗುತ್ತಿಗೆದಾರರಿಗೆ ಕೆಲಸ ಇಲ್ಲದಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಈ ರೀತಿ ವಂಚನೆ ನಡೆಯುತ್ತಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗುತ್ತಿಗೆದಾರ ಪ್ರಭಾಕರ ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆದು ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಈ ಬಗ್ಗೆ ಸೂಚನೆ ನೀಡುವುದಾಗಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದಲೂ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ನಗರದ ರೆಂಕೆದ ಗುತ್ತುವಿನಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯಕ್ಕೆ ಕಾದಿರಿಸಲಾಗಿರುವ ಜಮೀನಿನಲ್ಲಿರುವ ಅಕ್ರಮಗಳನ್ನು ಕೂಡಲೇ ತೆರವುಗೊಳಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ತಿಳಿಸಿದರು. ತಾಲೂಕಿನಲ್ಲಿ ಈಗಾಗಲೇ ಮಂಜೂರಾಗಿರುವ ಅಂಬೇಡ್ಕರ್ ಭವನಗಳ ನಿರ್ಮಾಣ ಕಾರ್ಯವನ್ನು ಸಮರ್ಪಕವಾಗಿ ನಡೆಸಬೇಕು, ಅಂಬೇಡ್ಕರ್ ಭವನಗಳಿಗೆ ಜಾಗ ಮಂಜೂರುಗೊಳಿಸುವಂತೆ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಜಾಗ ಮಂಜೂರು ಮಾಡುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನೇಮಕಾತಿಯಲ್ಲಿ ಮೀಸಲಾತಿಯನ್ನು ಪಾಲಿಸಲಾಗುತ್ತಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸರ್ಕಾರದ ಅನುದಾನ ಪಡೆದು ನಿರ್ಮಾಣವಾಗುವ ಇತರ ಸಮುದಾಯ ಭವನಗಳನ್ನು ಪಂಚಾಯಿತಿಗೆ ಹಸ್ತಾಂತರಿಸುವ ಅಗತ್ಯವಿಲ್ಲ. ಅದು ಆಯಾ ಸಮುದಾಯದವರ ಕೈಯಲ್ಲಿಯೇ ಇರುತ್ತದೆ, ಆದರೆ ಅಂಬೇಡ್ಕರ್ ಭವನಗಳನ್ನು ಮಾತ್ರ ಗ್ರಾ.ಪಂಗೆ ಹಸ್ತಾಂತರಿಸಲಾಗುತ್ತದೆ. ಇದು ತಾರತಮ್ಯ ನೀತಿಯಲ್ಲವೇ ಎಂದು ಮುಖಂಡರುಗಳು ಪ್ರಶ್ನಿಸಿದರು. ಈ ಬಗ್ಗೆ ವಿಸ್ತೃತ ಚರ್ಚೆ ನಡೆದು ಅಂಬೇಡ್ಕರ್ ಭವನಗಳ ನಿರ್ವಹಣೆಗೆ ಸ್ಥಳೀಯ ದಲಿತ ಸಮುದಾಯದ ಮುಖಂಡರುಗಳನ್ನು ಸಮಿತಿಯಲ್ಲಿ ಸೇರಿಸಿಕೊಳ್ಳುವುದು ಎಂದು ನಿರ್ಧರಿಲಾಯಿತು.
ಸಮುದಾಯದ ಮುಖಂಡರುಗಳಾದ ಸಂಜೀವ ಆರ್, ಶೇಖರ ಕುಕ್ಕೇಡಿ, ನೇಮಿರಾಜ ಕಿಲ್ಲೂರು, ಬೇಬಿ ಸುವರ್ಣ, ಶೇಖರ ಲಾಯಿಲ, ಜಯಾನಂದ ಪಿಲಿಕಳ, ಪುಷ್ಪರಾಜ್ ಶಿರ್ಲಾಲು, ಹರೀಶ್ ಎಳನೀರು, ಶ್ರೀಧರ ಕಳೆಂಜ ಹಾಗೂ ಇತರರು ವಿವಿಧ ವಿಚಾರಗಳನ್ನು ಮಂಡಿಸಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಸಮಾಜಕಲ್ಯಾಣ ಇಲಾಖೆಯ ಹೇಮಚಂದ್ರ, ಬೆಳ್ತಂಗಡಿ ಇನ್‌ಸ್ಪೆಕ್ಟರ್ ಸುಬ್ಬಪುರ ಮಠ್ ಉಪಸ್ಥಿತರಿದ್ದರು.
ದಲಿತ ಸಮುದಾಯದ ಅಭಿವೃದ್ಧಿಗೆ ಹಾಗೂ ಅವರ ಸಾಮಾಜಿಕ ಹಾಗೂ ಇತರ ಅಗತ್ಯಗಳಿಗೆ ಉಪಯೋಗವಾಗಬೇಕು ಎಂದು ನಿರ್ಮಿಸಲಾಗಿರುವ ಅಂಬೇಡ್ಕರ್ ಭವನಗಳು ದಲಿತರ ಅಗತ್ಯಗಳಿಗೆ ಸಿಗುತ್ತಿಲ್ಲ. ಯಾವುದೇ ಕಾರ್ಯಕ್ರಮ ನಡೆಸಬೇಕಾದರೆ ಗ್ರಾಮಪಂಚಾಯಿತಿ ಅಧ್ಯಕ್ಷರಿಂದ ಆರಂಭಿಸಿ ಸದಸ್ಯರ ಅನುಮತಿಯನ್ನೂ ಪಡೆಯಬೇಕು. ಕೆಲವೆಡೆ ಮಾಂಸಾಹಾರ ಮಾಡಬಾರದು ಎಂಬ ಕಂಡೀಷನ್ ಹಾಕುತ್ತಿದ್ದಾರೆ ಇದೆಲ್ಲ ನಿಲ್ಲಬೇಕು. ಗ್ರಾಮ ಪಂಚಾಯಿತಿಗಳು ಅಂಬೇಡ್ಕರ್ ಭವನಗಳನ್ನು ಕಮರ್ಷಿಯಲ್ ಆಗಿ ನೋಡುತ್ತಿದ್ದಾರೆ. ಇದು ಸರಿಯಲ್ಲ. ದಲಿತರಿಗಾಗಿ ರಚನೆಯಾಗುವ ಅಂಬೇಡ್ಕರ್ ಭವನಗಳ ನಿರ್ವಹಣೆಯ ಸಮಿತಿಯಲ್ಲಿ ಸಮುದಾಯದವರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಬರುವ ಮಲವಂತಿಗೆ ಗ್ರಾಮದಲ್ಲಿ ಗ್ರಾಮಪಂಚಾಯಿತಿ ಹೋಂಸ್ಟೇಗಳಿಗೆ ಪರವಾನಿಗೆ ನೀಡಿದೆ. ಇದು ಕಾನೂನು ಬಾಹಿರವಾಗಿದೆ. ಮೂಲ ನಿವಾಸಿಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಲು ಬಿಡದ ಅರಣ್ಯ ಇಲಾಖೆ ಅವರಿಗೆ ಹೇಗೆ ಅನುಮತಿ ನೀಡಿದೆ ಎಂದು ಶೇಖರ ಲಾಯಿಲ ಹಾಗೂ ಜಯಾನಂದ ಪಿಲಿಕಳ ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಯಾರಿಗೂ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ನೀಡಲಾಗಿಲ್ಲ ಎಲ್ಲ ಹೋಂಸ್ಟೇಗಳಿಗೂ ನೋಟೀಸ್ ನೀಡಲಾಗಿದೆ ಎಂದರು.
ಅಟ್ರಿಂಜೆ ಕೊರಗರ ಕಾಲನಿಗೆ ಸೇತುವೆ, ರಸ್ತೆ ಮಂಜೂರಾಗಿದೆ ಮನೆ ಕಟ್ಟಲು ಜಾಗ ಮಂಜೂರಾಗಿಲ್ಲ ಎಂದು ಅಲ್ಲಿನ ನಿವಾಸಿ ಸವಿತ ಗಮನ ಸೆಳೆದರು. ಐದು ಕೊರಗ ಕುಟುಂಬಗಳಿಗೆ ಮನೆ ಮಂಜೂರಾಗಿದೆ ಆದರೆ ಇನ್ನೂ ಸೈಟ್ ಗುರುತಿಸಿ ನೀಡಿಲ್ಲ, ಇದರಿಂದ ಸಮಸ್ಯೆಯಾಗುತ್ತಿದೆ ಎಂದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಜಾಗ ಮಂಜೂರಾಗಿರುವಲ್ಲಿ ಗಡಿ ಗುರುತು ಮಾಡಿಕೊಡುವುದಾಗಿ ತಿಳಿಸಿದರು. ಸುಲ್ಕೇರಿ ನಾಯ್ದಗುರಿಯಲ್ಲಿ ಆದಿವಾಸಿ ಸಮುದಾಯಗಳ ಪುನರ್ವಸತಿಗಾಗಿ 190 ಎಕರೆ ಜಾಗ ಮೀಸಲಿರಿಸಲಾಗಿದ್ದು ಈ ಜಾಗದ ಗಡಿ ಗುರುತು ಮಾಡಿ ಅದಕ್ಕೆ ಬೇಲಿ ಹಾಕಿ ಸಂರಕ್ಷಿಸುವಂತೆ ಒತ್ತಾಯಿಸಲಾಯಿತು.