

ಕಾರ್ಕಳ: ಇಲ್ಲಿನ ಬೈಪಾಸ್‌ನಿಂದ ಮಾಳ ಮುಳ್ಳೂರು ಗೇಟ್‌ವರೆಗಿನ ರಾಷ್ಟ್ರೀಯ ಹೆದ್ದಾರಿ 169ರ ನಿರ್ಮಾಣಕ್ಕಾಗಿ ಅವೈಜ್ಞಾನಿಕ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಕಾರ್ಕಳ ತಾಲೂಕಿನ ಮಾಳ, ಮುಡಾರು, ಮಿಯ್ಯರು ಗ್ರಾಮಗಳ ಭೂ ಮಾಲೀಕರ ಸಭೆ ಬಜಗೋಳಿಯಲ್ಲಿ ನಡೆಯಿತು.
80 ಭೂಮಾಲೀಕರು ಈ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ 169ರ ಯೋಜನೆಯಿಂದ ತಮ್ಮ ಕೃಷಿ ಭೂಮಿ, ವಾಸ್ತವ್ಯದ ಮನೆ, ಅಂಗಡಿಕೋಣೆ, ಜಾನುವಾರು ಹಟ್ಟಿ, ನೀರಾವರಿ ವ್ಯವಸ್ಥೆ, ಮೂಲಸೌಲಭ್ಯ ಕಳೆದುಕೊಳ್ಳುವ ಭೀತಿ ಉಂಟಾಗಿದೆ. ಸಭೆಯಲ್ಲಿ ಹೆದ್ದಾರಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು ಭೂಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಕೇವಲ ಕಾಟಾಚಾರಕ್ಕೆ ಸರ್ವೇ ಮಾಡಿದ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದರು. ಪರಿಹಾರದ ಮೊತ್ತ ತೀರಾ ಕಡಿಮೆ ನಮೂದಿಸಿ ನೋಟಿಸ್ ನೀಡಿದ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಅಗತ್ಯ ಬಿದ್ದಲ್ಲಿ ಹೋರಾಟದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಲಹೆ ವ್ಯಕ್ತವಾಯಿತು.
ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಹೋರಾಟ ಸಮಿತಿ ಪ್ರಮುಖರಾದ ಸಾಣೂರು ನರಸಿಂಹ ಕಾಮತ್, ಬೆಳುವಾಯಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಹೋರಾಟ ಪ್ರಮುಖರಾದ ರತ್ನಾಕರ ಶೆಟ್ಟಿ ಬೆಳುವಾಯಿ, ಜಯರಾಂ ಪೂಜಾರಿ ಬೆಳುವಾಯಿ, ಪದ್ಮನಾಭ ನಾಯ್ಕ ಮಾಳ, ಶ್ಯಾಮ ಶೆಟ್ಟಿ ಬಜಗೋಳಿ, ಮಾಧವ ಕಾಮತ್ ಮಿಯ್ಯರು, ಅಮ್ಜಾದ್ ಮಿಯ್ಯರು, ಪಂಚಾಯಿತಿ ಸದಸ್ಯ ರಜತ್ ರಾಂ ಮೋಹನ್, ಪ್ರಶಾಂತ್ ಮುಡಾರು ಉಪಸ್ಥಿತರಿದ್ದರು. ರಾಜೇಶ್ ನ್ಯಾಕ್ ಮಾಳ ಕಾರ್ಯಕ್ರಮ ನಿರೂಪಿಸಿದರು.