ಹುಬ್ಬಳ್ಳಿಯಲ್ಲಿ ಜೆಡಿಎಸ್ ಪ್ರಮುಖರ ಸಭೆ 12ರಂದು

h4-JDS 3
Published on

ಹುಬ್ಬಳ್ಳಿ: ಜೆಡಿಎಸ್ ಕೋರ್ ಕಮಿಟಿಯ 21 ಸದಸ್ಯರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಅ. 12ರಂದು ಪ್ರಮುಖರ ಸಭೆ ನಡೆಯಲಿದೆ ಎಂದು ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಸೂಚನೆಗೆ ಮೇರೆಗೆ ಈ ಸಭೆ ಆಯೋಜಿಸಲಾಗಿದೆ. ಈಗಾಗಲೇ ಕಲಬುರ್ಗಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಸಭೆ ಮುಗಿದಿದೆ. ಅ. 11ರಂದು ವಿಜಯಪುರ, 12 ರಂದು ಹುಬ್ಬಳ್ಳಿ ಹಾಗೂ 13ರಂದು ಬೆಳಗಾವಿಯಲ್ಲಿ ವಿಭಾಗ ಹಾಗೂ ಜಿಲ್ಲಾಮಟ್ಟದ ಪ್ರಮುಖರ ಸಭೆ ನಡೆಯಲಿದೆ. ಕೋರ್​ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಸೇರಿದಂತೆ ಇತರ ನಾಯಕರು ಭಾಗವಹಿಸುವರು ಎಂದರು.

ಅಲ್ಪಸಂಖ್ಯಾತರ ರಕ್ಷಣೆ: ಬಿಜೆಪಿ ಜತೆ ಮೈತ್ರಿಯಾಗಿದೆ ಎಂದರೆ ಅಲ್ಪಸಂಖ್ಯಾತರಿಗೆ ಭಯ ಬೇಡ. ಅವರನ್ನು ಜೆಡಿಎಸ್ ನಾಯಕರು ರಕ್ಷಿಸಲಿದ್ದಾರೆ. ಈ ಹಿಂದೆ ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸಿದಾಗಲೂ ರಕ್ಷಣೆ ಮಾಡಲಾಗಿತ್ತು. ಆಗ ಜಮೀರ್ ಅಹ್ಮದ್ ಅವರೇ ಮುಂದಾಳತ್ವ ವಹಿಸಿದ್ದರು. ಕಾಂಗ್ರೆಸ್ ಬರೀ ಊಹಾಪೋಹ ಹಬ್ಬಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಜತೆ ಮೈತ್ರಿಯಾದರೆ ರಾಜ್ಯದಲ್ಲಿ ಹೆಚ್ಚು ಎಂಪಿ ಸೀಟ್​ಗಳನ್ನು ಗೆಲ್ಲಲಿದ್ದೇವೆ. ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದಲ್ಲಿ ತಲಾ ಒಂದು ಎಂಪಿ ಸೀಟ್​ಗೆ ಟಿಕೆಟ್ ಕೇಳಲಿದ್ದೇವೆ ಎಂದು ಹೇಳಿದರು.

ಇದಕ್ಕೂ ಮೊದಲು ಗದಗ, ಹಾವೇರಿ, ಧಾರವಾಡ ಮತ್ತು ಕಾರವಾರ ಜಿಲ್ಲೆಯ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆ ನಡೆಯಿತು.

ಗ್ರಾಮೀಣ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಮಾಜಿ ಸಚಿವ ಕೆ.ಎನ್. ಗಡ್ಡಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪ್ರಮಖರಾದ ಪ್ರಕಾಶ ಅಂಗಡಿ, ಈಶ್ವರ ಕಿತ್ತೂರ, ಹಜರತ್​ಅಲಿ ಜೋಡುಮನಿ, ನವೀನ್​ಕುಮಾರ ಮಡಿವಾಳರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net