ಪರಿಣಾಮಕಾರಿಯಾಗಿ 'ಶಕ್ತಿ' ಯೋಜನೆ ಅನುಷ್ಠಾನಗೊಳಿಸಿ

UDP-18-11-DCmeeting
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿದರು. ಪ್ರತೀಕ್​ ಬಾಯಲ್​, ಸಿದ್ದಲಿಂಗಪ್ಪ ಟಿ. ಇದ್ದರು.
Published on

ಡಿಸಿ ವಿದ್ಯಾಕುಮಾರಿ ಸೂಚನೆ | ಉಡುಪಿಯಲ್ಲಿ ಸಮನ್ವಯ ಸಮಿತಿ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಮಹಿಳೆಯರ ಸುರಕ್ಷತೆ, ಭದ್ರತೆ ಹಾಗೂ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಮಿಷನ್​ ಶಕ್ತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಅಲ್ಲದೆ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ವಿವಿಧ ಸಮನ್ವಯ ಸಮಿತಿಗಳ ಸಭೆಯಲ್ಲಿ ಮಾತನಾಡಿದರು.

ಅರಿವು ಮೂಡಿಸಿ

ಸಮಾಜದಲ್ಲಿ ಲಿಂಗತಾರತಮ್ಯ ಹೋಗಲಾಡಿಸಿ, ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಶಿಕ್ಷಣಕ್ಕೆ ಉತ್ತೇಜನ ನೀಡಬೇಕು. ಹೆಣ್ಣು ಮಕ್ಕಳಿಗೆ ವೈಯಕ್ತಿಕ ನೈರ್ಮಲ್ಯ ಹಾಗೂ ಸ್ವಚ್ಛತೆ ಕುರಿತು ಯುವಜನರ ಸಹಭಾಗಿತ್ವದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರಸವಪೂರ್ವ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ಪ್ರಕರಣ ನಡೆಯದಂತೆ ಅಗತ್ಯವಿರುವ ಎಲ್ಲ ಎಚ್ಚರಿಕಾ ಕ್ರಮ ವಹಿಸಬೇಕು. ಇವುಗಳ ಉಲ್ಲಂಘನೆ ಆಗಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಮಾತೃ ವಂದನಾ ಯೋಜನೆ

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 5,928 ವಾರ್ಷಿಕ ಗುರಿ ಹೊಂದಲಾಗಿದೆ. 4,333 ಗರ್ಭಿಣಿಯರು ಹಾಗೂ ಬಾಣಂತಿಯರನ್ನು ಫಲಾನುಭವಿಗಳನ್ನಾಗಿಸಿ ಈವರೆಗೆ ಮೊದಲನೇ ಕಂತಿನಲ್ಲಿ 4,314 ಫಲಾನುಭವಿಗಳಿಗೆ 1,29,42,000 ರೂ. ಹಣ ಪಾವತಿ ಮಾಡಲಾಗಿದೆ. ಎರಡನೇ ಕಂತಿನಲ್ಲಿ 1,56,000 ರೂ. ಪಾವತಿಸಿದ್ದು, ಬಾಕಿ ಉಳಿದವರಿಗೆ ಶೀಘ್ರವಾಗಿ ವಿತರಿಸಬೇಕು ಎಂದರು.

ಬಾಕಿ ಪ್ರಕರಣ ಇತ್ಯರ್ಥ ಪಡಿಸಿ

ನೊಂದ ಮಹಿಳೆಯರಿಗೆ ಒಂದೇ ಸೂರಿನಡಿ ಸೌಲಭ್ಯ ಕಲ್ಪಿಸುವ ಸಖಿ ಒನ್​ ಸ್ಟಾಪ್​ ಸೆಂಟರ್​ನಲ್ಲಿ 2024ರ ಏಪ್ರಿಲ್​ನಿಂದ ಜೂನ್​ ವರೆಗೆ ಒಟ್ಟು 64 ಪ್ರಕರಣ ದಾಖಲಾಗಿದ್ದು, 30 ಪ್ರಕರಣ ಇತ್ಯರ್ಥವಾಗಿದೆ. ಬಾಕಿ 34 ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನೂ ಸಹ ಕಾನೂನು ಸಲಹೆಗಾರರ ನೆರವಿನೊಂದಿಗೆ ಬಗೆಹರಿಸಬೇಕು. ಸಾಮಾಜಿಕ, ಆರ್ಥಿಕ ಕಾರಣದಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿಕೊಳ್ಳಲು ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯದಲ್ಲಿ ಕಾರ್ಯವಾಗಬೇಕು ಎಂದರು.

ಸಭೆಯಲ್ಲಿ ಜಿಪಂ ಸಿಇಒ ಪ್ರತೀಕ್​ ಬಾಯಲ್, ಎಎಸ್ಪಿ ಸಿದ್ದಲಿಂಗಪ್ಪ ಟಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಪೌರಾಯುಕ್ತ ರಾಯಪ್ಪ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮರ್ಪಕವಾಗಿ ಬಾಲ್ಯ ವಿವಾಹ ತಡೆಯಿರಿ

ಮಣಿಪಾಲದ ಉದ್ಯೋಗಸ್ಥ ಮಹಿಳೆಯರ ವಸತಿಗೃಹದ ನಿರ್ವಹಣೆ ಮಾಡಬೇಕು. ಆಹಾರ ವಿತರಣೆಯಲ್ಲೂ ಸುಧಾರಣೆ ಆಗಬೇಕು. ಆಗಾಗ ವಸತಿಗೃಹದ ವ್ಯವಸ್ಥಾಪನಾ ಸಮಿತಿ ಸಭೆ ನಡೆಸಿ, ಕುಂದು-ಕೊರತೆ ಬಗೆಹರಿಸಬೇಕು. ಜಿಲ್ಲೆಯಲ್ಲಿ ಬಾಲ್ಯ ವಿವಾಹದ 1 ಪ್ರಕರಣ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಈ ಪ್ರಕರಣ ಆಗದಂತೆ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಗ್ರಾಪಂಗಳಲ್ಲಿ ರಚಿಸಿರುವ ಕಾವಲು ಸಮಿತಿಯವರು ನಿಯಮಿತವಾಗಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ವಿದ್ಯಾಕುಮಾರಿ ಸಲಹೆ ನೀಡಿದರು.

ಕಡಿಮೆ ತೂಕ ಹಾಗೂ ತೀವ್ರ ಅಪೌಷ್ಟಿಕತೆಯಿರುವ ಮಕ್ಕಳ ಪೌಷ್ಟಿಕ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಮಕ್ಕಳಿಗೆ ಆಹಾರ ಉತ್ಪನ್ನ ನೀಡುವ ಕುರಿತು ಪಾಲಕರಿಗೆ ಮಾಹಿತಿ ನೀಡಬೇಕು. ಹದಿನೈದು ದಿನಕ್ಕೊಮ್ಮೆ ಅಂತಹವರ ಮನೆಗೆ ಭೇಟಿ ಮಾಡಿ ಸುಧಾರಣೆ ಆಗಿದೆಯೇ ಇಲ್ಲವೇ ಎಂದು ಪರಿಶೀಲಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು. ಪ್ರತೀಕ್​ ಬಾಯಲ್​. ಸಿಇಒ, ಜಿಪಂ ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net