

ಮಂಡ್ಯ: ನಗರದ ಹೊರವಲಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟವಾಗದೆ ಗೊಂದಲಮಯವಾಗಿದೆ ಎನ್ನುವ ಅಭಿಪ್ರಾಯ ಕೇಳಿಬಂದಿವೆ.
ನಗರದ ಕರ್ನಾಟಕ ಸಂಘದ ಆವರಣದಲ್ಲಿ ವಿವಿಧ ಸಂಘಟನೆಗಳಿಂದ ಆಯೋಜಿಸಿದ್ದ ಸಭೆಯಲ್ಲಿ ಹಲವರು ತಮ್ಮ ಮಾತನ್ನು ಹಂಚಿಕೊಂಡದರು. ಸಮ್ಮೇಳನದ ರೂಪುರೇಷೆ ಮತ್ತು ತುರ್ತಾಗಿ ಆಗಬೇಕಾದ ವಿಷಯದ ಬಗ್ಗೆ ಸ್ಥಳೀಯ ಅಭಿವೃದ್ಧಿ ವಿಚಾರಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿ ಕೊಡಬೇಕಿದೆ ಎಂದರು.
ನಾವು ಹಾವೇರಿ ಸಮ್ಮೇಳನಕ್ಕೂ ಹೋಗಿದ್ದೆವು. ಅಲ್ಲಿನ ಅಧ್ವಾನಗಳನ್ನು ನೋಡಿದ್ದೇವೆ. ಆದ್ದರಿಂದ ಹಾವೇರಿ ಸಮ್ಮೇಳನವನ್ನು ಮಾದರಿಯನ್ನಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಸಮ್ಮೇಳನ ನಡೆದ ಜಾಗಕ್ಕೆ ಕಾರಿನಲ್ಲಿ ಹೋಗಲು 56 ಕಿ.ಮೀ, ನಡೆದುಕೊಂಡು ಹೋಗಲು 2 ಕಿ.ಮೀ ಸಾಗಬೇಕಾಗಿತ್ತು. ಬಂದ ಅತಿಥಿ, ಗಣ್ಯರನ್ನು ಸರಿಯಾಗಿ ನಡೆಸಿಕೊಳ್ಳಲಾಗಲಿಲ್ಲ. ಹಾವೇರಿಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಜನ ಬರುತ್ತಾರೆ. ಆದರೆ ಮಂಡ್ಯದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಬಹಳ ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕಿದೆ. ನಗರದ ಹೊರವಲಯದಲ್ಲಿ ಮಾಡುವ ಅವಶ್ಯಕತೆ ಏನಿತ್ತು. ಅಲ್ಲದೆ, ಬೆಳೆಯನ್ನು ಕಟಾವು ಮಾಡಬೇಕಾದ ಅನಿವಾರ್ಯತೆ ಏನಿದೆ ಎಂದು ಪ್ರಶ್ನಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ನಿವೃತ್ತ ಪ್ರಾಚಾರ್ಯ ಎಸ್.ಬಿ.ಶಂಕರೇಗೌಡ, ಕಸಾಪ ಮಾಜಿ ಅಧ್ಯಕ್ಷ ಡಿ.ಪಿ.ಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಸಿಪಿಐಎಂನ ಸಿ.ಕುಮಾರಿ, ಜಾನಪದ ಗಾಯಕಿ ಮಂಜುಳಾ, ಸಾಹಿತಿ ಸತೀಶ್ ಜವರೇಗೌಡ, ಗೊರವಾಲೆ ಚಂದ್ರಶೇಖರ್, ಕಾರಸವಾಡಿ ಮಹದೇವು, ಚ.ಮ.ಉಮೇಶ್, ಅರುಣಕುಮಾರಿ, ಹುರುಗಲವಾಡಿ ರಾಮಯ್ಯ ಇತರರಿದ್ದರು.