

ಕಾಸರಗೋಡು: ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಬೆರೆಸುವುದರ ಜತೆಗೆ ಕೇಂದ್ರ ಯೋಜನೆಗಳನ್ನು ಹಾಳುಗೈಯುವ ಕೀಳುಮಟ್ಟದ ರಾಜಕೀಯದಿಂದ ಕೇರಳದಲ್ಲಿ ಜನಸಾಮಾನ್ಯರು ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಹೇಳಿದರು.
ಪಕ್ಷದ ಯುವ ಘಟಕ ಯುವ ಮೋರ್ಚಾ, ಮಧೂರು ಪಂಚಾಯಿತಿ ಸಮಿತಿ ಕೇಳುಗುಡ್ಡೆ ಘಟಕ ರಚನೆ ಅಂಗವಾಗಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗುವ ಕೇಂದ್ರದ ಕೆಲವೊಂದು ಯೋಜನೆಗಳು ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ತಡೆಹಿಡಿಯುವ ಪ್ರಯತ್ನ ನಡೆಸುತ್ತಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದ ಹತ್ತು ವರ್ಷಗಳ ಆಡಳಿತವು ಕೇರಳವನ್ನು ದೊಡ್ಡ ಸಾಲಗಾರ ರಾಜ್ಯವನ್ನಾಗಿಸಿದೆ. ಈ ಬಿಕ್ಕಟ್ಟನ್ನು ನಿವಾರಿಸಲು ಎಡ ಮತ್ತು ಐಕ್ಯ ರಂಗಗಳಿಗೆ ಪರ್ಯಾಯವಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆಯಿದೆ ಎಂದರು.
ಯುವಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷ ಅಶ್ವಿನ್ ಕೊಲ್ಲಾಲಯಿಲ್, ಕೇಲುಗುಡ್ಡೆ ವಾರ್ಡ್ ಜನಪ್ರತಿನಿಧಿ ಸೌಮ್ಯಾ ದಿನೇಶ್, ಶ್ರೀಧರನ್, ಪ್ರದೀಪ್ ಉಪಸ್ಥಿತರಿದ್ದರು.