

ಮೈಸೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ವ್ಯಾಪಕ ಚರ್ಚೆ ನಡೆಯತ್ತಿರುವ ನಡುವೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅಹಿಂದ ನಾಯಕರು ನಗರದಲ್ಲಿ ಮಂಗಳವಾರ ರಾತ್ರಿ ಡಿನ್ನರ್ ಹೆಸರಿನಲ್ಲಿ ಒಟ್ಟಿಗೆ ಸೇರಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ನಾಡಹಬ್ಬ ದಸರಾ ಉತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಬ್ಯಾಂಡ್ ಕಾರ್ಯಕ್ರಮದಲ್ಲಿ ಪಾಲ್ಗೊ ಳ್ಳುವ ಸಲುವಾಗಿ ಸಚಿವ ಡಾ.ಜಿ. ಪರಮೇಶ್ವರ್ ನಗರಕ್ಕೆ ಮಂಗಳವಾರ ಭೇಟಿ ನೀಡಿದ್ದರು. ಆದರೆ, ಸಚಿವ ಸತೀಶ್ ಜಾರಕಿಹೊಳಿ ಅವರ ಅಧಿಕೃತ ಕಾರ್ಯಕ್ರಮ ಇರಲಿಲ್ಲ. ಆದರೆ, ಮಂಗಳವಾರ ಬೆಳಗ್ಗಿನಿಂದ ಸಂಜೆವರೆಗೆ ಅವರು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡ ರುಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ ನಡುವೆ ದಸರಾದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂ ಡರು.
ನಂತರ ಅರಮನೆ ಆವರಣದಲ್ಲಿ ರಾತ್ರಿ ಹಮ್ಮಿಕೊಂಡಿದ್ದ ಪೊಲೀಸ್ ಬ್ಯಾಂಡ್ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಡಾ.ಎಚ್.ಸಿ. ಮಹದೇವಪ್ಪ ಅವರೊಂದಿಗೆ ಪಾಲ್ಗೊಂಡು ಬಳಿಕ ಚಾಮರಾಜನಗರ ಸಂಸದ ಸುನಿಲ್ ಬೋಸ್ ಅವರ ಮೈಸೂರಿನ ನಿವಾಸದಲ್ಲಿ ಹಮ್ಮಿಕೊಂಡಿದ್ದ ಅಹಿಂದ ನಾಯಕರ ಸಭೆಯಲ್ಲಿ ಪಾಲ್ಗೊಂಡರು. ಸತೀಶ್ ಜಾರಕಿಹೊಳಿ ಅವರಿಗೆ ನಗರದಲ್ಲಿ ಅಧಿಕೃತ ಕಾರ್ಯಕ್ರಮ ಇಲ್ಲದೆ ಇದ್ದರೂ ಮೈಸೂರಿನಲ್ಲಿಯೇ ಸಂಜೆವರೆಗೆ ಕಾಲ ಕಳೆದಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಸುನಿಲ್ ಬೋಸ್ ನಿವಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವರಾದ ಡಾ.ಜಿ. ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಡಿನ್ನರ್ ಪಾರ್ಟಿ ಹೆಸರಿನಲ್ಲಿ ಒಟ್ಟಿಗೆ ಸೇರಿ ಸಭೆ ನಡೆಸಿದರು. ಊಟದ ನಂತರ ರಾಜ್ಯ ರಾಜಕಾರಣದ ಕುರಿತು ಗಂಭೀರ ಚರ್ಚೆಗಳು ನಡೆದಿದ್ದು, ಸುಮಾರು ಎರಡು ತಾಸು ಈ ನಾಯಕರು ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ನಡೆಯುತ್ತಿರುವ ಪ್ರಯತ್ನವನ್ನು ತಡೆಯಬೇಕು. ಒಂದುವೇಳೆ ಅಧಿಕಾರದಿಂದ ಕೆಳಗಿಳಿಯುವ ಅನಿವಾರ್ಯತೆ ನಿರ್ಮಾಣವಾದರೆ ನಾವು ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸೋಣ. ಯಾರಿಗೆ ಅವಕಾಶ ಸಿಕ್ಕರೂ ಒಗಟ್ಟಾಗಿ ಇರೋಣ. ಮುಖ್ಯಮಂತ್ರಿ ಸ್ಥಾನ ಅಹಿಂದ ನಾಯಕರಿಗೆ ಸಿಗುವಂತಾಗಲಿ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅಹಿಂದ ಪ್ರಮುಖ ಪಾತ್ರ ವಹಿಸಿದ್ದು, ಇದನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಬೇಕು. ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರವಾಗಿ ಎಲ್ಲೂ ಸಹ ಬಹಿರಂಗವಾಗಿ ಹೇಳಿಕೆ ನೀಡದೆ ಇರುವ ಕುರಿತು ಮೂವರು ಸಚಿವರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಸಚಿವ ಡಾ.ಜಿ. ಪರಮೇಶ್ವರ್, ಸಭೆ ನಡೆಸುವ ಉದ್ದೇಶದಿ ಂದ ಸಂಸದ ಸುನಿಲ್ ಬೋಸ್ ಮನೆಗೆ ಭೇಟಿ ನೀಡಿಲ್ಲ. ಊಟ ಮಾಡುವ ಉದ್ದೇಶದಿಂದ ಒಟ್ಟಿಗೆ ಸೇರಿದ್ದೆವು. ಮೈಸೂರಿನ ಆಥಿತ್ಯ ಬಿಡುವುದಕ್ಕೆ ಆಗುತ್ತಾ? ಅದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದರು.
ನಾನು, ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ. ಮಹದೇವಪ್ಪ, ಶಾಸಕ ಎ.ಆರ್ ಕೃಷ್ಣಮೂರ್ತಿ ಒಟ್ಟಿಗೆ ಊಟ ಮಾಡಿದೆವು. ಈ ಸಂದರ್ಭ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ನಾವು ಆಗಿಂದಾಗೆ ಒಟ್ಟಿಗೆ ಸೇರುತ್ತಿರುತ್ತೇವೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ದಲಿತ ಮುಖ್ಯಮಂತ್ರಿ ವಿಚಾರದ ಕುರಿತು ಸದ್ಯಕ್ಕೆ ಯಾವುದೇ ಚರ್ಚೆ ಇಲ್ಲ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಮಾಡುವುದಿಲ್ಲ. ಸಿದ್ದರಾಮಯ್ಯ ರಾಜೀನಾಮೆ ನೀಡುವ ಅವಶ್ಯಕತೆಯೂ ಇಲ್ಲ ಎಂದರು.
‘ನಿಮಗೆ ಸಿಎಂ ಅಗುವ ಆಸೆ ಇಲ್ಲವೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಪ್ರಶ್ನೆಯೇ ಅಲ್ಲ, ಸಿಎಂ ಆಗುವ ವಿಚಾರವನ್ನು ನೀವು ಮಾತನಾಡುವುದು ಬೇಡ ಎಂದರು.
ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೂ ಮುಡಾ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ. ಮುಡಾ ಹಗರಣ ಮೈಸೂರಿನ ಬಹಳಷ್ಟು ಜನರಿಗೆ ಗೊತ್ತಿಲ್ಲ. ಇನ್ನು ಹರಿಯಾಣದ ಜತೆಗೆ ತಿಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.