

ಮಧುಗಿರಿ: ಬೆಳೆವಿಮೆ ಹೆಸರಿನಲ್ಲಿ ವಿಮಾ ಕಂಪನಿಗಳು ರೈತರನ್ನು ಶೋಷಿಸುತ್ತಿದ್ದು, ಪರಿಹಾರ ನೀಡುವುದಾಗಿ ರೈತರ ರಕ್ತ ಹೀರುತ್ತಿದ್ದಾರೆ. ಹೀಗಿದ್ದೂ ಅಧಿಕಾರಿಗಳು ಏಕೆ ಕ್ರಮವಹಿಸಿಲ್ಲ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಪ್ರಶ್ನಿಸಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ 10 ಸಾವಿರ ರೈತರು ನೋಂದಣಿಯಾಗಿದ್ದು, ಇದರಲ್ಲಿ ಕೇವಲ 90 ರೈತರಿಗೆ 6 ಲಕ್ಷ ರೂಪಾಯಿ ಪರಿಹಾರ ಸಿಕ್ಕಿದೆ. ಈ ಬಾರಿಯೂ 10 ಸಾವಿರ ರೈತರ ನೋಂದಣಿ ಗುರಿಯಿದ್ದು, 6250 ರೈತರು ನೋಂದಣಿಯಾಗಿದ್ದಾರೆ. ಆದರೆ, ಕಳೆದ ವರ್ಷ ಪರಿಹಾರವೇ ಬಂದಿಲ್ಲ. ಈಗಲೂ ರೈತರನ್ನು ವಂಚಿಸುವ ದಂಧೆ ಆರಂಭಿಸಿದ್ದು, ರೈತರ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇರಬೇಕು. ಟಾರ್ಪಲ್ ವಿತರಣೆ ಹಾಗೂ ಗುಣಮಟ್ಟದ ಬಗ್ಗೆ ಲೋಪವಿದ್ದು ಈ ಬಗ್ಗೆ ಪರಿಶೀಲನೆ ಮಾಡಿ. ಕೃಷಿ ಹೊಂಡ ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪವಿದೆ. ಹಳೆಯ ಕೃಷಿಹೊಂಡಗಳನ್ನು ಮುಚ್ಚಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಳೆದ ವರ್ಷದ ಕೃಷಿಹೊಂಡಗಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರದಲ್ಲಿ ಶೇ.75 ಬಿತ್ತನೆಯಾಗಿದ್ದು ಬೀಜ ವಿತರಣೆಗಾಗಿ ಶೇಂಗಾ, ತೊಗರಿ, ಜೋಳದ ಬೇಡಿಕೆ ಕಡಿಮೆಯಾಗಿದ್ದು, ಮಳೆ ಹೆಚ್ಚಾದರೆ ಯುರಿಯಾ ಬೇಡಿಕೆ ಹೆಚ್ಚಾಗಲಿದೆ. ಬಿತ್ತನೆ ಬೀಜವನ್ನು ರೈತರಿಗೆ ಪೂರೈಸಲಾಗುವುದು ಎಂದು ಎಡಿ ಹನುಮಂತರಾಯಪ್ಪ ತಿಳಿಸಿದರು.
ಲೋಕೋಪಯೋಗಿ ಇಲಾಖೆಯಲ್ಲಿ 11.7 ಕೋಟಿ ರೂಪಾಯಿ ಅನುದಾನ ಸರ್ಕಾರ ತಡೆಹಿಡಿದಿದ್ದು, ಮರಳಿ ತರುತ್ತೇನೆ. 10 ಸರ್ಕಾರಿ ಶಾಲೆ, ಮಿಡಿಗೇಶಿ ಡಿಗ್ರಿ ಕಾಲೇಜುಗಳ ಕಾಮಗಾರಿ ಶೀಘ್ರ ಮುಗಿಸುವಂತೆ ಎಇಇ ರಾಜಗೋಪಾಲ್ ಅವರಿಗೆ ಶಾಸಕರು ಸೂಚಿಸಿದರು.
ತಾಲೂಕಿನಲ್ಲಿ 72500 ಪಡಿತರ ಕಾರ್ಡ್‌ಗಳಿದ್ದು, 2.36 ಲಕ್ಷ ಫಲಾನುಭವಿಗಳಿದ್ದಾರೆ. ನೂತನವಾಗಿ 940 ಅರ್ಜಿಗಳಿದ್ದು, ಪಡಿತರ ವಿತರಣೆ ನಡೆಯುತ್ತಿದೆ ಎಂದ ಆಹಾರ ಶಿರಸ್ತೇದಾರ್ ಗಣೇಶ್ ಮಾತಿಗೆ ಆಹಾರಧಾನ್ಯ ಗುಣಮಟ್ಟದಿಂದ ಕೂಡಿರಬೇಕು. ಅಂಗಡಿಯಲ್ಲಿ ಹೆಚ್ಚುವರಿ ಹಣ ಕೇಳುತ್ತಿರುವ ಬಗ್ಗೆ ದೂರಿದ್ದು, ಈ ಬಗ್ಗೆಯೂ ಎಚ್ಚರವಹಿಸಿ. ಕಟ್ಟಕಡೆಯ ವ್ಯಕ್ತಿಗೂ ಪಡಿತರ ಸಿಗಬೇಕು ಎಂದು ಶಾಸಕರು ತಿಳಿಸಿದರು.
ತಾಲೂಕಿನಲ್ಲಿ 1 ಪಬ್ಲಿಕ್ ಶಾಲೆಯಿದ್ದು, ಮತ್ತೆ 7 ಶಾಲೆಗಳಿಗೆ ಇಂಗ್ಲೀಷ್ ಮಾಧ್ಯಮದಲ್ಲಿ ಆರಂಭಿಸಲು ಸೂಚಿಸಿದ್ದು, ಶೇ.21 ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ. ಉಳಿದನ್ನು ಶೀಘ್ರವಾಗಿ ವಿತರಣೆ ಮಾಡುತ್ತೇವೆ ಎಂದು ಬಿಇಒ ನಂಜುಂಡಯ್ಯ ತಿಳಿಸಿದರು .
ಮನೆಗಳ ವಿಚಾರಕ್ಕೆ ಕೋಪಗೊಂಡ ಶಾಸಕರು, ಜಿಲ್ಲಾಧಿಕಾರಿ ನಿವೇಶನ ಹಂಚಿಗೆ ಮಾಡಲು 60 ಗ್ರಾಮಗಳಲ್ಲಿ ಭೂಮಿ ಮಂಜೂರು ಮಾಡಿದ್ದು, ತಹಸೀಲ್ದಾರ್ ಬೇಗ ಕಾರ್ಯಕ್ಕೆ ಚಾಲನೆ ನೀಡುವಂತೆ ಕಂದಾಯ ಇಲಾಖೆಗೆ ಸೂಚಿಸಿದರು.
ಪುರಸಭೆಯ ಅಂಗಡಿ ಮಳಿಗೆಗಳಿಂದ ಆದಾಯ ಸೋರುತ್ತಿದ್ದು ಪುರಸಭೆಯ ಬೊಕ್ಕಸಕ್ಕೆ ಹೊಡೆತ ಬಿದ್ದಿದೆ. ನಾನು ಮಧ್ಯ ಪ್ರವೇಶ ಮಾಡಲ್ಲ. ಕಾನೂನಿನಂತೆ ಮರು ಹರಾಜು ನಡೆಸಿ ನ್ಯಾಯಯುತವಾಗಿ ಪ್ರಕ್ರಿಯೆ ಮುಗಿಸಿ ಎಂದು ಮುಖ್ಯಾಧಿಕಾರಿ ನಜ್ಮಾ ಅವರಿಗೆ ಶಾಸಕ ಎಂ.ವಿ.ವೀರಭದ್ರಯ್ಯ ಸೂಚಿಸಿದರು. ಸಭೆಗೆ ಗೈರಾದ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗೆ ನೊಟೀಸ್ ನೀಡುವಂತೆ ತಾಪಂ ಇಒ ದೊಡ್ಡಸಿದ್ದಯ್ಯ ಅವರಿಗೆ ಸೂಚಿಸಿದರು.
ಎತ್ತಿನಹೊಳೆ ಯೋಜನೆ ಕಾಮಗಾರಿ ಶೀಘ್ರ ಮುಗಿಸಿ : ಎತ್ತಿನಹೊಳೆ ಯೋಜನೆಯ ಕಾಮಗಾರಿ ವಿಳಂಬಕ್ಕೆ ಕಾರಣವೇನು ? ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಇನ್ನು ಎಷ್ಟು ದಿನ ಕಾಲವಕಾಶ ಬೇಕಾಗಬಹುದು ಎಂದು ಸಭೆಯಲ್ಲಿ ಶಾಸಕರು ಎತ್ತಿನಹೊಳೆ ಕಚೇರಿಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಅನುದಾನದ ಕೊರತೆ ಹಾಗೂ ಭೂಸ್ವಾಧೀನದ ಸಮಸ್ಯೆ, ಕರೊನಾದಿಂದಾಗಿ ಕಾಮಗಾರಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಜಿಲ್ಲೆಯ 120 ಕಿ.ಮೀ. ವ್ಯಾಪ್ತಿಯ ಎತ್ತಿನಹೊಳೆ ಕೆಲಸದಲ್ಲಿ 56.6 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಮಧುಗಿರಿಯ 39.5 ಕಿ.ಮೀ ಕಾಮಗಾರಿಯಲ್ಲಿ 17 ಕಿ.ಮೀ. ಕಾಮಗಾರಿ ಮುಗಿದಿದೆ. ಉಳಿದಂತೆ ಕಾಮಗಾರಿ ನಡೆಯುತ್ತಿದ್ದು, ನೀರು ಬರಲು ಕನಿಷ್ಠ 4 ವರ್ಷ ಬೇಕಾಗಬಹುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯಗೆ ಇಂಜಿನಿಯರ್ ಶ್ರೀಪೀಠ ಮಾಹಿತಿ ನೀಡಿದರು.