ಹಾಸ್ಟೆಲ್‌ಗೆ ಮಹಿಳಾ ವಾರ್ಡನ್ ನೇಮಿಸಿ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸೂಚನೆ

19_12_Mdy_04(Meeting)
Published on
ಮಂಡ್ಯ: ಹೆಣ್ಣು ಮಕ್ಕಳ ಹಾಸ್ಟಲ್ ಹಾಗೂ ವಸತಿ ಶಾಲೆಗಳಲ್ಲಿ ಮಹಿಳಾ ವಾರ್ಡನ್‌ಗಳನ್ನು ನಿಯೋಜಿಸಬೇಕು. ಆದರೆ ಕೇವಲ ದಾಖಲೆಗಳ ನಿರ್ವಹಣೆ ಅವರ ಕೆಲಸವಾಗಬಾರದು. ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ತಿಳಿಸುವುದರ ಜತೆಗೆ ಅಧಿಕಾರಿಗಳು ಹಾಸ್ಟೆಲ್ ಹಾಗೂ ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯಿಂದ ಹೊರಗುಳಿದಿರುವ ಮಕ್ಕಳೊಂದಿಗೆ ಸಮಾಲೋಚನೆ ನಡೆಸಬೇಕು. ಅವರಿಗೆ ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪಾಲಕರ ಮನಪರಿವರ್ತಿಸಿ ಅವರನ್ನು ಶಾಲೆಗೆ ದಾಖಲಿಸುವ ಕೆಲಸ  ನಿರ್ವಹಿಸಿ. ನೈತಿಕ ಶಿಕ್ಷಣಕ್ಕೆ ಶಾಲೆಯಲ್ಲಿ ಹೆಚ್ಚಿನ ಆದ್ಯತೆ ನೀಡಿ ಎಂದರು.
ಬಾಲ್ಯ ವಿವಾಹ ಎಂದರೆ ಜೈಲಿಗೆ ಕಳುಹಿಸುವ ಕಾರ್ಯಕ್ರಮ ಎಂದು ಎಲ್ಲರಿಗೂ ತಿಳಿಸಬೇಕಿದೆ. ಬಾಲ್ಯವಿವಾಹ ಮಾಡಿಸುವ ಪಾಲಕರು, ಪುರೋಹಿತರು, ಕಲ್ಯಾಣ ಮಂಟಪ ನೀಡುವವರು, ಭಾಗವಹಿಸುವವರು ಎಲ್ಲರಿಗೂ ಶಿಕ್ಷೆ ಇದೆ. ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು. ಹೊಸ ವರ್ಷದ ಶುಭಾರಂಭ ಎಂದು ಮೋಜಿಗಾಗಿ 18 ವರ್ಷಕ್ಕಿಂತ ಕೆಳಗಿನವರು ಸಹ ಮದ್ಯ ಸೇವನೆ ಮಾಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಹಾಸ್ಟಲ್ ವಾರ್ಡನ್‌ಗಳು ಹೆಚ್ಚಿನ ನಿಗಾ ವಹಿಸಿ. ಅಬಕಾರಿ ಇಲಾಖೆಯವರು ಮದ್ಯ ಮಾರಾಟ ಮಾಡುವವರಿಗೆ 18 ವರ್ಷಕ್ಕಿಂತ ಕೆಳಗಿನವರಿಗೆ ಮದ್ಯ ಮಾರಾಟ ಮಾಡುವುದು ಕಂಡು ಬಂದರೆ ಪರವಾನಗಿ ರದ್ದು ಪಡಿಸಿ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಳಿನಿ ಕುಮಾರಿ ಮಾತನಾಡಿ, ಮಕ್ಕಳು ಭಯ ಹಾಗೂ ಹಿಂಸಾತ್ಮಕ ವಾತಾವರಣದಲ್ಲಿ ಬೆಳೆದರೆ ಅವರಲ್ಲಿರುವ ಕ್ರಿಯಾಶೀಲತೆ ಕುಗ್ಗಿ ಹೋಗುತ್ತದೆ. ಮಕ್ಕಳ ಉತ್ತಮ ಬೆಳವಣಿಗೆಗೆ ಹಲವಾರು ಕಾನೂನುಗಳಿವೆ. ಅವುಗಳ ಬಗ್ಗೆ ಜಿಲ್ಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಕ್ಕಳನ್ನು ರಕ್ಷಿಸಬೇಕಿರುವ ಶಿಕ್ಷಕರು, ವಾರ್ಡನ್, ಅಧಿಕಾರಿಗಳಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಮಕ್ಕಳ ರಕ್ಷಣೆ ಹೇಗೆ ಎಂಬ ಪ್ರಶ್ನೆ ಹುಟ್ಟುತ್ತದೆ. ಲೈಂಗಿಕ ದೌರ್ಜನ್ಯ ಶಿಕ್ಷಾರ್ಹ ಅಪರಾಧ ಎಂದು ತಿಳಿದಿದ್ದರೂ ಅಪರಾಧ ಮಾಡುತ್ತಾರೆ ಎಂದರೆ ಅವರಿಗೆ ಶಿಕ್ಷೆಯ ತೀವ್ರತೆಯ ಬಗ್ಗೆ ಅರಿವು ಇಲ್ಲವೇ ಎಂಬ ಸಂದೇಹ ಸಹ ಮೂಡುತ್ತದೆ. ಫೋಸ್ಕೋ ಕಾಯ್ದೆ ಸೇರಿದಂತೆ ಮಕ್ಕಳಿಗೆ ಇರುವ ಕಾನೂನಿನ ಬಗ್ಗೆ ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.
ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಮಾತನಾಡಿ, ನರೇಗಾ ಯೋಜನೆಯಡಿ ಸ್ಥಳಾವಕಾಶ ಇರುವ ಶಾಲೆಗಳಲ್ಲಿ ಆಟದ ಮೈದಾನ ನಿರ್ಮಾಣ ಮಾಡಲಾಗುತ್ತಿದೆ. ಸಾಮಾಜಿಕ ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಪೌಷ್ಠಿಕತೆ ಆಹಾರ ಒದಗಿಸುವ ಗಿಡಗಳನ್ನು ನೆಡಲಾಗುತ್ತಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಮಕ್ಕಳ ಹಕ್ಕುಗಳ ಕುರಿತು ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಭೆ ನಡೆಸಬೇಕು. ಈ ಕುರಿತಂತೆ ಪ್ರತಿ ಮಾಹೆ ನಡೆಯುವ ಕಂದಾಯಾಧಿಕಾರಿಗಳ ಸಭೆಯಲ್ಲಿ ಪರಿಶೀಲಿಸಲಾಗುವುದು. ವಸತಿ ಶಾಲೆಗಳಲ್ಲಿ ಉನ್ನತ ಅಧಿಕಾರಿಗಳಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇದರಿಂದ ಮಕ್ಕಳಿಗೆ ಪ್ರೇರಣೆ ಸಿಗುತ್ತದೆ ಹಾಗೂ ಮಕ್ಕಳಿಗೆ ಅವರ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಇರುವ ಕಾನೂನುಗಳ ಬಗ್ಗೆ ಅರಿವು ಸಹ ಸಿಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜು, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ವಿಜಯ ಪ್ರಕಾಶ್, ಸಿಡಿಪಿಒ ಕುಮಾರಸ್ವಾಮಿ, ಮಕ್ಕಳ ಸಹಾಯವಾಣಿಯ ನಿರ್ದೇಶಕ ವೆಂಕಟೇಶ್, ಮಹೇಶ್‌ಚಂದ್ರ ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net