

ಮಂಗಳೂರು: ನಗರದ ಬಾವುಟಗುಡ್ಡೆಯಲ್ಲಿ ಸ್ಥಾಪನೆಗೊಳ್ಳಲಿರುವ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆ ಪುರಪ್ರವೇಶ ಹಿನ್ನೆಲೆಯಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ನಗರದ ಚಿಲಿಂಬಿಯ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಕಚೇರಿಯಲ್ಲಿ ಶುಕ್ರವಾರ ಜರುಗಿತು.
ಆ.29ರಂದು ಸಂಪಾಜೆ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಯನ್ನು ಸಂಜೆ 4.30ಕ್ಕೆ ಪಡೀಲ್‌ನಲ್ಲಿ ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ನೇತೃತ್ವದಲ್ಲಿ ಸ್ವಾಗತಿಸಲು ನಿರ್ಧರಿಸಲಾಯಿತು. ಮೇಯರ್ ಪ್ರೇಮಾನಂದ ಶೆಟ್ಟಿ ಪಡೀಲ್‌ನಲ್ಲಿ ಪುಷ್ಪಾರ್ಚನೆ ಮೂಲಕ ಪ್ರತಿಮೆಯನ್ನು ಸ್ವಾಗತಿಸಲಿದ್ದಾರೆ. ಸಂಸದರು, ಶಾಸಕರು, ಗಣ್ಯರು ಭಾಗವಹಿಸುವರು. ಬಳಿಕ ಪೂರ್ಣಕುಂಭ ಸ್ವಾಗತದೊಂದಿಗೆ ಪ್ರತಿಮೆಯನ್ನು ಬಾವುಟಗುಡ್ಡೆಗೆ ತರಲಾಗುತ್ತದೆ. ಬಾವುಟಗುಡ್ಡೆಯಲ್ಲಿ ರಾಮಯ್ಯ ಗೌಡ ಹಾಗೂ ಅಮರ ಸುಳ್ಯದ ಹೋರಾಟದ ಬಗ್ಗೆ ಮಾಹಿತಿ, ಪ್ರತಿಮೆ ಜತೆ ಆಗಮಿಸಿದವರಿಗೆ ಧನ್ಯವಾದ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಸದಾನಂದ ಗೌಡ, ಕಾರ್ಯದರ್ಶಿ ರಾಮಣ್ಣ ಗೌಡ, ಕೋಶಾಧಿಕಾರಿ ಪೂರ್ಣಿಮಾ, ನಿರ್ದೇಶಕರಾದ ಪುರುಷೋತ್ತಮ ದೇವಸ್ಯ, ಆನಂದ ಪಿ.ಎಚ್. ಉಪಸ್ಥಿತರಿದ್ದರು.