ಒತ್ತುವರಿ ಗುರುತಿಸಲು ಶಾಸಕರ ಸಮ್ಮುಖದಲ್ಲಿ ಸಭೆ

ಒತ್ತುವರಿ ಗುರುತಿಸಲು ಶಾಸಕರ ಸಮ್ಮುಖದಲ್ಲಿ ಸಭೆ
Published on

ವಿರಾಜಪೇಟೆ: ಪಟ್ಟಣ ವ್ಯಾಪ್ತಿಯಲ್ಲಿರುವ ತೋಡು, ರಾಜಕಾಲುವೆಗಳನ್ನು ಸರ್ವೇ ನಡೆಸಿ ಒತ್ತುವರಿ ಗುರುತಿಸುವ ಬಗ್ಗೆ ಮುಂದಿನ ಸಭೆಯಲ್ಲಿ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷರಾದ ಎಂ.ಕೆ.ದೇಚಮ್ಮ ಹೇಳಿದರು.

ಇತ್ತೀಚೆಗೆ ನಡೆದ ಪಟ್ಟಣ ಪಂಚಾಯಿತಿ ವಿಶೇಷ ಸಭೆಯಲ್ಲಿ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಈ ನಿರ್ಣಯಕ್ಕೆ ಬರಲಾಯಿತು.

ರಾಜಕಾಲುವೆ, ತೋಡು ಅತಿಕ್ರಮಣದ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ತಹಸೀಲ್ದಾರ್ ಕಚೇರಿಯಿಂದ ಕಾಲುವೆ ಸರ್ವೇಗೆ ಒತ್ತಡ ಬರುತ್ತಿರುವ ಹಿನ್ನೆಲೆ ಈ ನಿರ್ಣಯಕ್ಕೆ ಬರಲಾಗಿದೆ ಎಂದು ದೇಚಮ್ಮ ತಿಳಿಸಿದರು.

ಸರ್ವೇ ಇಲಾಖೆಯ ಸಹಾಯಕ ನಿರ್ದೇಶಕ ಬಾನಂಗಡ ಅರುಣ್ ಕುಮಾರ್ ಮಾತನಾಡಿ, ರಾಜಕಾಲುವೆ ಅಥವಾ ಮುಖ್ಯ ತೋಡು ಪಟ್ಟಣ ವ್ಯಾಪ್ತಿಯಲ್ಲಿದ್ದು, ಹಿಂದಿನ ಎಡಿಎಲ್‌ಆರ್ ಅವಧಿಯಲ್ಲಿ ಬಂದ ದೂರಿನ ಹಿನ್ನೆಲೆ ಜಿಲ್ಲಾ ಸರ್ವೇ ನಿರ್ದೇಶಕರ ಆದೇಶದಂತೆ ಸರ್ವೇ ನಡೆಸಲಾಗಿತ್ತು. ನಾನು ಅಧಿಕಾರ ಸ್ವೀಕರಿಸಿದ ಬಳಿಕ ಕಾಲುವೆ ಸರ್ವೇಯನ್ನು ತಡೆ ಹಿಡಿಯಲಾಗಿದೆ. ಪುರಸಭೆ ಆದೇಶ ನೀಡಿದರೆ ಸರ್ವೇ ಕಾರ್ಯ ಮುಂದುವರಿಸಲಾಗುವುದು ಎಂದರು.

ತಹಸೀಲ್ದಾರ್ ರಾಮಚಂದ್ರ ಮಾತನಾಡಿ, ಮುಖ್ಯಮಂತ್ರಿಗಳು ಹಾಗೂ ಸಚಿವರು ಸಭೆಯೊಂದರಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳಿಗೆ ಮುಖ್ಯ ಕಾಲುವೆಗಳ ಬಗ್ಗೆ ಕ್ರಮವಹಿಸಲು ನಿರ್ದೇಶನ ನೀಡಿದ ಹಿನ್ನೆಲೆ, ಕಾನೂನು ರೀತಿಯಲ್ಲಿ ಸರ್ವೇ ನಡೆಸಿ ವರದಿ ನೀಡಲಾಗುತ್ತದೆ. ಒತ್ತುವರಿ ತೆರವು ಮಾಡುವ ಬಗ್ಗೆ ಪುರಸಭೆ ನಿರ್ಣಯ ಕೈಗೊಳ್ಳಲಿ ಎಂದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಕಾಲುವೆಗಳನ್ನು ಸರ್ವೇ ನಡೆಸಿ ಒತ್ತುವರಿಯಾಗಿದ್ದರೆ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಬೇಕಿದೆ. 1904ರ ನಕ್ಷೆ ಇಟ್ಟುಕೊಂಡು, ನಿರ್ಧಾರ ಮಾಡಲು ಸಾಧ್ಯವಾಗುವುದಿಲ್ಲ. ಒತ್ತುವರಿ ಜತೆಗೆ ಶೌಚಗೃಹದ ತ್ಯಾಜ್ಯ ನೇರವಾಗಿ ತೋಡಿಗೆ ಬಿಟ್ಟು, ಅದು ನದಿಗೆ ಸೇರಿ ಮಾಲಿನ್ಯ ಉಂಟಾಗುವುದನ್ನು ತಡೆಯಬೇಕಿದೆ. ಒತ್ತುವರಿ ಗುರುತಿಸುವ ಸರ್ವೇಯ ಬಳಿಕ ಶಾಸಕರನ್ನು ಸಭೆಗೆ ಕರೆದು ತೀರ್ಮಾನ ಕೈಗೊಳ್ಳುವಂತೆ ಹೇಳಿದರು.

ಮುಖ್ಯಾಧಿಕಾರಿ ಚಂದ್ರಕುಮಾರ್, ಉಪಾಧ್ಯಕ್ಷರಾದ ಫಸೀಹಾ ತಬುಸಂ, ಸದಸ್ಯ ರಂಜಿ ಪೂಣಚ್ಚ, ಮಹ್ಮದ್ ರಾಫಿ, ಮಹಾದೇವ, ಜಲೀಲ್, ಶಾಹುಲ್ ಹಮೀದ್, ರಜನಿಕಾಂತ್, ಆಶಾ ಸುಟ್ಟಯ್ಯ, ಆಗಸ್ಟಿನ್‌ಬೆನ್ನಿ, ಡಿ.ಪಿ. ರಾಜೇಶ್, ಯಶೋದಾ, ಸುನಿತಾ ಜೂನ, ಆಸೀಫ್ ಮನ್ನಾ, ಎಸ್.ಎನ್, ಮತೀನ್, ಕೆ.ಸಿ. ಶಬರೀಶ್ ಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net