

ಸಿದ್ದಾಪುರ: ಘಟ್ಟದ ಮೇಲಿನ ಭಾಗದವರು ಪ್ರತ್ಯೇಕ ಜಿಲ್ಲೆಗಾಗಿ ಕಳೆದ 35ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ . ಆದ್ದರಿಂದ ಹೋರಾಟವನ್ನು ಗ್ರಾಮೀಣ ಪ್ರದೇಶದಲ್ಲೂ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಕದಂಬ ಜಿಲ್ಲೆ ಹೋರಾಟ ಸಮಿತಿ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಪಟ್ಟಣದ ಬಾಲಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಘಟ್ಟದ ಮೇಲಿನ ತಾಲೂಕಿನವರಿಗೆ ಜಿಲ್ಲಾ ಕೇಂದ್ರ ಸಾಕಷ್ಟು ದೂರದಲ್ಲಿದೆ. ಯಾವುದೇ ಕೆಲಸ ಮಾಡಿಕೊಳ್ಳಬೇಕಾದರೂ ಜಿಲ್ಲಾ ಕೇಂದ್ರ ಕಾರವಾರಕ್ಕೆ ಹೋಗಬೇಕಾಗಿದೆ. ಇದರಿಂದ ಹಣ, ಸಮಯ ವ್ಯರ್ಥವಾಗುತ್ತಿದೆ. ತಾಲೂಕು ಕೇಂದ್ರದಿಂದ 80ಕಿ.ಮೀ ದೂರದಲ್ಲಿ ಜಿಲ್ಲಾ ಕೇಂದ್ರ ಇರಬೇಕು ಎಂಬ ಸರ್ಕಾರದ ನಿಯಮವೂ ಇದೆ. ಇದೆಲ್ಲವನ್ನೂ ಪರಿಗಣಿಸಿ ಘಟದ ಮೇಲಿನ ತಾಲೂಕನ್ನು ಸೇರಿಸಿ ಕದಂಬ ಜಿಲ್ಲೆ ಮಾಡಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದರು.
ಏ. 6ರಂದು ಹೇರೂರಿನ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಸಭೆ ನಡೆಸಲಾಗುವುದು. ನಮ್ಮ ಕಾರ್ಯಕರ್ತರು ಪ್ರತಿಮನೆಗೂ ಭೇಟಿ ನೀಡಿ ಜಿಲ್ಲೆಯ ಅವಶ್ಯಕತೆ ಬಗ್ಗೆ ಜನರಿಗೆ ತಿಳಿಸಿ ಸಹಿ ಸಂಗ್ರಹ ಹಾಗೂ ಗ್ರಾಪಂ ಮಟ್ಟದಲ್ಲಿ ಸಭೆ, ನಂತರ ತಾಲೂಕು ಮಟ್ಟದಲ್ಲಿ ಬೃಹತ್ ಹೋರಾಟದ ಸಭೆ ನಡೆಸಲಾಗುತ್ತದೆ. ಇದು ಪಕ್ಷಾತೀತವಾಗಿದ್ದು, ಎಲ್ಲರೂ ಕೈಜೋಡಿಸಬೇಕು ಎಂದರು.
ಹೋರಾಟ ಸಮಿತಿಯ ವಿನಾಯಕ ಭಟ್ಟ ಮಾತನಾಡಿ, ಘಟ್ಟದ ಮೇಲಿನ ತಾಲೂಕಿನಲ್ಲಿ ಯಾವುದೇ ರಾಷ್ಟ್ರೀಯ ಹೆದ್ದಾರಿಗಳು ಹೋಗಿಲ್ಲ. ಯಾವುದೇ ಯೋಜನೆಗಳು ಬಂದರೂ ಅದು ಜಿಲ್ಲಾ ಕೇಂದ್ರ ಕಾರವಾರ ಇಲ್ಲವೇ ಪಕ್ಕದ ಅಂಕೋಲಾಕ್ಕೆ ಹೋಗುತ್ತಿದೆ. ಇದರಿಂದ ನಮ್ಮ ಭಾಗದ ಯುವಕರು ನಿರುದ್ಯೋಗಿಗಳಾಗಿದ್ದು, ಉದ್ಯೋಗಕ್ಕಾಗಿ ಬೇರೆ ಕಡೆಗೆ ಹೋಗುತ್ತಿದ್ದಾರೆ. ಘಟ್ಟದ ಮೇಲಿನ ತಾಲೂಕಿನಲ್ಲೂ ಕೈಗಾರಿಕೆ ಸ್ಥಾಪಿಸಲು,ಪ್ರವಾಸೋದ್ಯಮ ಮಾಡಲು ಅವಕಾಶವಿದೆ. ವಿಮಾನ ನಿಲ್ದಾಣ,ವೈದ್ಯಕೀಯ ಕಾಲೇಜ್, ಕೈಗಾರಿಕೆಗಳು ಬರಬೇಕಾದರೆ ಜಿಲ್ಲಾ ಕೇಂದ್ರ ಘಟ್ಟದ ಮೇಲೆ ಆಗಬೇಕು ಎಂದರು.
ವಾಜಗೋಡು ಗ್ರಾಪಂ ಸದಸ್ಯ ಕೃಷ್ಣಮೂರ್ತಿ ನಾಯ್ಕ ಐಸೂರು, ಕಮಲಾಕರ ನಾಯ್ಕ, ಜಿ.ಎಸ್. ಹೆಗಡೆ, ಎಂ.ಎಂ. ಭಟ್ಟ ಇತರರಿದ್ದರು.