ಅಧಿವೇಶನಕ್ಕೂ ಪೂರ್ವವೇ ಬೆಂಗಳೂರಿನಲ್ಲಿ ಸಭೆ

Meeting in Bengaluru even before the session
ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿದರು.
Published on

ಕೂಡಲಸಂಗಮ: ಬೆಳಗಾವಿ ಅಧಿವೇಶನಕ್ಕೂ ಪೂರ್ವದಲ್ಲಿಯೇ ಪಕ್ಷಾತೀತವಾಗಿ ಬೆಂಗಳೂರಿನಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಕಾರ್ಯಕಾರಣಿ ಸಭೆ ಕರೆದು 2ಎ ಮೀಸಲಾತಿ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಮಂಗಳವಾರ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಕಾರ್ಯಕಾರಣಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ಬೆಂಗಳೂರಿನ ಸಭೆಗೆ ಬಸವಜಯಮತ್ಯುಂಜಯ ಸ್ವಾಮೀಜಿ, ಬಸವನಗೌಡ ಪಾಟೀಲ ಯತ್ನಾಳ ಅವರನ್ನು ಕರೆಯುವುದಿಲ್ಲ. ಮುರುಗೇಶ ನಿರಾಣಿಯವರನ್ನು ಕರೆಯುತ್ತೇವೆ ಎಂದರು.

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವು ಮಾಡಿದ 2ಎ ಮೀಸಲಾತಿ ಹೋರಾಟ ಪ್ರಜ್ಞಾರಹಿತವಾಗಿ ಆಗಿದೆ. ಮುಂದಿನ ಹೋರಾಟವನ್ನು ಪ್ರಜ್ಞಾಸಹಿತವಾಗಿ ಮಾಡುತ್ತೇವೆ. ಯತ್ನಾಳರ ಕುತಂತ್ರದಿಂದ ಹೋರಾಟ ಹಾದಿ ದಿಕ್ಕು ತಪ್ಪುತ್ತಿದೆ. ಬಸವಜಯಮತ್ಯುಂಜಯ ಸ್ವಾಮೀಜಿ ಒಂದು ಪಕ್ಷಕ್ಕೆ ಸೀಮಿತವಾಗಿ ಹೋರಾಟ ಮಾಡುತ್ತಿರುವುದನ್ನು ನಾವು ಖಂಡಿಸುತ್ತೆವೆ ಎಂದರು.

ಬಿಜೆಪಿ ಅವಧಿಯಲ್ಲಿ ನಡೆದ ಹೋರಾಟದಲ್ಲಿ ಯತ್ನಾಳ ಅವರ ಮೋಸಕ್ಕೆ ನಾವೆಲ್ಲರೂ ಬಲಿಯಾದೆವು. ಶ್ರೀಗಳು ಬಲಿಯಾಗಿದ್ದಾರೆ. ಶ್ರೀಗಳು ಎಲ್ಲ ಪಕ್ಷದವರನ್ನು ಕೂಡಿಸಿಕೊಂಡು ಹೋರಾಟ ಮಾಡಬೇಕು. ಒಂದು ಪಕ್ಷಕ್ಕೆ ಸೀಮಿತವಾದರೆ ಅವರ ಹೋರಾಟ ಅವರಿಗೆ, ನಾವು ಪ್ರತ್ಯೇಕವಾಗಿ ಹೋರಾಟ ಆರಂಭಿಸುತ್ತೇವೆ. ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದರು.

ಮುಖ್ಯಮಂತ್ರಿಗಳ ಬಳಿ ನಾಲ್ಕು ಬಾರಿ ನಿಯೋಗ ತೆಗೆದುಕೊಂಡು ಹೋಗಿದ್ದೇವೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂವಿಧಾನಾತ್ಮಕವಾಗಿ ಮೀಸಲಾತಿ ಕೊಡುವ ಭರವಸೆಯನ್ನೂ ಕೊಟ್ಟಿದ್ದಾರೆ. ಹಿಂದಿನ ಸರ್ಕಾರ ಮಾಡಿದ ತಪ್ಪನ್ನು ನಾನು ಮಾಡಲ್ಲ. ಹಿಂದುಳಿದ ವರ್ಗದ ಸಂಪೂರ್ಣ ಮಾಹಿತಿ ಪಡೆದು, ಸರ್ವೆ ಕಾರ್ಯ ಸಂಪೂರ್ಣ ಮುಗಿಸಿ ಕೊಡುತ್ತೇವೆ, ಕಾಲಾವಕಾಶ ಕೊಡಿ ಎಂದು ಮುಖ್ಯಮಂತ್ರಿ ಹೇಳಿದರು. ಅವರ ಮಾತಿಗೆ ಬೆಲೆ ಕೊಡದೆ ಟ್ಯಾಕ್ಟರ್ ರ‌್ಯಾಲಿ ಮಾಡುವುದು ಸರಿಯೇ? ಎಂದರು. ನಮ್ಮ ಸರ್ಕಾರದ ಅವಧಿಯಲ್ಲಿಯೇ ಮೀಸಲಾತಿ ಪಡೆಯುತ್ತೇವೆ, ಬಿಡುವುದಿಲ್ಲ ಎಂದರು.

ಬೆಳಗಾವಿಯಲ್ಲಿ ಶ್ರೀಗಳು ಡಿಸೆಂಬರ್ 10 ರಂದು ಹಮ್ಮಿಕೊಂಡ ಹೋರಾಟ ನಿಲ್ಲಿಸಲು ಮುಖ್ಯಮಂತ್ರಿಗಳು ನಿಮ್ಮ ಮೆಲೆ ಒತ್ತಡ ಹಾಕಿದ್ದಾರೆಯೇ? ಎಂಬ ಪ್ರಶ್ನೆಗೆ ಸಮಾಜದ ವಿಷಯದಲ್ಲಿ ರಾಜಕೀಯವನ್ನು ನಾನು ತರುವುದಿಲ್ಲ ಎಂದರು. ಆರಂಭದಿಂದಲೂ ನಾನು ಸಚಿವ ಆಕಾಂಕ್ಷಿಯಾಗಿದ್ದೇನೆ ಎಂದರು.

ಸಭೆಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಟ್ರಸ್ಟ್‌ನ ಟ್ರಸ್ಟಿಗಳಾದ ಶೇಖರಪ್ಪ ಬಾದವಾಡಗಿ, ಗಂಗಣ್ಣ ಬಾಗೇವಾಡಿ, ಶಿವಾನಂದ ಕಂಠಿ, ವಿವಿಧ ಜಿಲ್ಲೆಯ ಪದಾಧಿಕಾರಿಗಳು, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net