

ರಾಯಚೂರು: ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಅವೇಶನ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ನಗರಾಭಿವೃದ್ಧಿ ಸಚಿವರು ಸೇರಿದಂತೆ ಜಿಲ್ಲೆಯ ಅಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆದು ಸಮಸ್ಯೆ ಇತ್ಯರ್ಥಗೊಳಿಸಲಾಗುವುದು ಎಂದು ಪೌರಾಡಳಿತ ಖಾತೆ ಸಚಿವ ರಹೀಂ ಖಾನ್ ಹೇಳಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲಿಯೂ ನಿತ್ಯ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಐದಾರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ನೀರಿನ ಲಭ್ಯತೆಯಿದ್ದರೂ ಪೂರೈಕೆಯಲ್ಲಿ ಸಮಸ್ಯೆಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಲೇ ಪರಿಸ್ಥಿತಿ ಈ ರೀತಿಯಿದ್ದರೆ ಬೇಸಿಗೆಯಲ್ಲಿ ಸಮಸ್ಯೆ ಗಂಭೀರವಾಗುವ ಸಾಧ್ಯತೆಗಳಿವೆ. ಎಲ್ಲ ಅಕಾರಿಗಳು ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಗಮನ ಹರಿಸಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡಬೇಕು. ಕೊಳವೆ ಬಾವಿ ಕೊರೆಸಬೇಕು ಎಂದು ಸೂಚಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾಕಾರಿ ಜಗದೀಶ ಮಾತನಾಡಿ, ಹಟ್ಟಿಯಲ್ಲಿ 5 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಬಹುಗ್ರಾಮ ಯೋಜನೆ ರೂಪಿಸಲಾಗಿದ್ದರೂ ಸಮರ್ಪಕವಾಗಿ ನೀರು ಪೂರೈಕೆ ಸಾಧ್ಯವಾಗಿಲ್ಲ. ಲಿಂಗಸುಗೂರಿನಲ್ಲಿ ಎನ್‌ಆರ್‌ಬಿಸಿ ಮೂಲಕ ನೀರು ಹರಿಸಲಾಗುತ್ತಿದ್ದು, ಸಿಂಧನೂರಿನಲ್ಲಿ ಐದು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.
ಮಾನ್ವಿಯಲ್ಲಿ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ರಾಯಚೂರು ನಗರದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ 12 ವಾರ್ಡ್‌ಗಳಿಗೆ, ಕೃಷ್ಣಾ ನದಿಯಿಂದ 23 ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಚಿಕ್ಕಸುಗೂರು ನೀರು ಶುದ್ಧೀಕರಣ ಘಟಕದಲ್ಲಿ ಒಂದೇ ಮೋಟರ್ ಇದ್ದು, ಮತ್ತೊಂದು ಮೋಟರ್ ಅವಶ್ಯಕತೆಯಿದೆ. ಅದಕ್ಕೆ 5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಮಾನ್ವಿಯಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಕೆರೆ ನಿರ್ಮಾಣ ಮಾಡಲಾಗಿದ್ದು, ಕೆರೆಯಲ್ಲಿ ನೀರಿದ್ದರೂ ಜನರಿಗೆ ಸಮರ್ಪಕ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದರೂ ಬಳಕೆ ಮಾಡಲಾಗುತ್ತಿಲ್ಲ ಎಂದು ಹೇಳಿದರು.
ಜಿಲ್ಲೆಯ ಬಹುತೇಕ ನಗರ, ಪಟ್ಟಣ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಿ ಬಾಕಿ ಹೆಚ್ಚಾಗಿ ಉಳಿದಿದ್ದು, ರಾಯಚೂರು ನಗರಸಭೆಯ್ಲಲಿ 3.90 ಕೋಟಿ ರೂ. ತೆರಿಗೆ ಬಾಕಿಯಿದೆ. ಲೆಕ್ಕಾಚಾರ ಇದಕ್ಕಿಂತ ಹೆಚ್ಚಾಗಿದೆ. ಕೆಲವರು ಮನೆಯ ತೆರಿಗೆ ಪಾವತಿಸಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿಕೊಂಡಿದ್ದು, ಅವುಗಳ ಪರಿಶೀಲನೆ ನಡೆಸುವುದು ಜತೆಗೆ ತೆರಿಗೆ ವಸೂಲಿಗೆ ಹೆಚ್ಚಿನ ಪ್ರಯತ್ನ ನಡೆಸಬೇಕು ಎಂದು ಸಚಿವ ರಹೀಂ ಖಾನ್ ತಿಳಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯ ನಾಯಕ, ಜಿಲ್ಲಾಕಾರಿ ಚಂದ್ರಶೇಖರ ನಾಯಕ ಹಾಗೂ ಜಿಲ್ಲೆಯ ವಿವಿಧ ಇಲಾಖೆ ಅಕಾರಿಗಳು ಉಪಸ್ಥಿತರಿದ್ದರು.