ನೇಪಾಳಿ ಮಹಿಳೆ ಸಾವು ಪ್ರಕರಣ ಬಗೆಹರಿಸಿ

HUN-MAR-21-1(BONDED LABOUR PROGRAMME)
ಹುಣಸೂರು ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜೀತ ವಿಮುಕ್ತರಿಗೆ ಬಿಡುಗಡೆ ಪತ್ರ ವಿತರಿಸಲಾಯಿತು. ಎಚ್.ಬಿ.ವಿಜಯಕುಮಾರ್, ಬಸವರಾಜು, ಮಂಜುನಾಥ್, ಮೋಹನಕುಮಾರಿ, ಶ್ರೀನಿವಾಸ್ ಇತರರಿದ್ದರು.
Published on

ಹುಣಸೂರು: ಎಚ್.ಡಿ.ಕೋಟೆ ತಾಲೂಕಿನ ಕೈಲಾಸಪುರ ಗ್ರಾಮದ ತೋಟದ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದ ನೇಪಾಳಿ ಮೂಲದ ಮಹಿಳೆ ನಿರ್ಮಲಾ ಸಾವು ಪ್ರಕರಣ ಗೊಂದಲದ ಗೂಡಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಗೊಂದಲ ಪರಿಹರಿಸಬೇಕೆಂದು ಜೀವಿಕ ಸಂಸ್ಥೆಯ ಜಿಲ್ಲಾ ಸಂಚಾಲಕ ಬಸವರಾಜು ಆಗ್ರಹಿಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜೀತವಿಮುಕ್ತರ ಸಭೆಯಲ್ಲಿ ಮಾತನಾಡಿದ ಅವರು, ವರ್ಷದಿಂದಲೂ ಈ ಪ್ರಕರಣ ಜೀತವಿಮುಕ್ತ ಸಭೆಯಲ್ಲಿ ಚರ್ಚೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ ನೇಪಾಳಿ ಮೂಲದ ನಿರ್ಮಲಾ, ಅವರ ಪತಿ ಮತ್ತು ಇಬ್ಬರು ಮಕ್ಕಳು ಕೈಲಾಸಪುರದ ಈರೇಗೌಡರ ತೋಟದಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು. ಈ ನಡುವೆ ನಿರ್ಮಲಾ ಪತಿಯೊಂದಿಗೆ ತೋಟದ ಮಾಲೀಕ ಜಗಳವಾಡಿದ ಪರಿಣಾಮ ಪತಿ ಕೊಡಗಿಗೆ ತೆರಳಿ ಎಸ್ಟೇಟ್ ಒಂದರಲ್ಲಿ ಕೂಲಿಯಾಳಾಗಿ ದುಡಿಯುತ್ತಿದ್ದರು. ನಿರ್ಮಲಾ ದುಡಿಯುತ್ತಿದ್ದ ತೋಟದ ಮಾಲೀಕ ನೀಡುತ್ತಿರುವ ಕಿರುಕುಳದ ವಿಷಯ ತಾಲೂಕು ಆಡಳಿತಕ್ಕೆ ತಿಳಿದುಬಂದ ಹಿನ್ನೆಲೆಯಲ್ಲಿ ಆಕೆಯನ್ನು ಅಲ್ಲಿಂದ ಕೊಡಗಿನಲ್ಲಿರುವ ಪತಿಯೊಂದಿಗೆ ಸೇರಿಸಲಾಗಿತ್ತು. ಈ ಕುಟುಂಬಕ್ಕೆ ಜೀತದಿಂದ ಬಿಡುಗಡೆ ನೀಡಿ, ಜೀತದಾಳಾಗಿ ದುಡಿಸಿಕೊಂಡ ಮಾಲೀಕನ ವಿರುದ್ಧ ಕಾನೂನು ಕ್ರಮಕ್ಕೆ ಸಂಸ್ಥೆ ಒತ್ತಾಯಿಸಲಾಗಿತ್ತು ಎಂದು ಮಾಹಿತಿ ನೀಡಿದ್ದರು.

ನಾಲ್ಕು ತಿಂಗಳ ಹಿಂದೆ ಆಯೋಜನೆಗೊಂಡಿದ್ದ ಉಪ ವಿಭಾಗ ವ್ಯಾಪ್ತಿಯ ಜೀತವಿಮುಕ್ತ ಸಭೆಯಲ್ಲಿ ಎಚ್.ಡಿ. ಕೋಟೆ ತಾಲೂಕಿನ ಅಧಿಕಾರಿಗಳು ಮಹಿಳೆ ನಿರ್ಮಲಾ ಮೂರ್ಛೆರೋಗದಿಂದ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ನಂತರದ ದಿನಗಳಲ್ಲಿ ಪತಿ ಮತ್ತು ಮಕ್ಕಳೂ ಪತ್ತೆ ಇಲ್ಲವೆನ್ನುವ ಮಾತುಗಳು ಕೇಳಿಬಂದಿವೆ. ಹಾಗಾದರೆ ನಿರ್ಮಲಾ ಏನಾದರು? ಕುಟುಂಬ ಎಲ್ಲಿದೆ? ಈ ಕುರಿತು ಅಧಿಕಾರಿಗಳು ಈವರೆಗೂ ಸ್ಪಷ್ಟನೆ ನೀಡುತ್ತಿಲ್ಲ. ನಿರ್ಮಲಾ ಸಾವಿನ ಪ್ರಕರಣ ಅನುಮಾನಗಳಿಗೆ ಕಾರಣವಾಗಿದ್ದು, ಕೂಡಲೇ ಕ್ರಮವಹಿಸಬೇಕೆಂದು ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಅವರಿಗೆ ಒತ್ತಾಯಿಸಿದರು.

ಉಪವಿಭಾಗಾಧಿಕಾರಿ ಮಾತನಾಡಿ, ಪ್ರಕರಣದ ಕುರಿತು ಸಮಗ್ರ ವರದಿ ನೀಡುವಂತೆ ಎಚ್.ಡಿ.ಕೋಟೆ ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ಸೂಚಿಸಿದರು. ನಂತರ ಮಾತನಾಡಿದ ಅವರು, ಹುಣಸೂರು ಉಪವಿಭಾಗ ವ್ಯಾಪ್ತಿಯ ತಾಲೂಕುಗಳಲ್ಲಿ ಜೀತ ಪದ್ಧತಿ ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಈಗಾಗಲೇ ವಿವಿಧ ತಾಲೂಕುಗಳಲ್ಲಿ ಜೀತ ಪದ್ಧತಿಯಿಂದ ವಿಮುಕ್ತಗೊಂಡಿರುವ ವ್ಯಕ್ತಿ ಮತ್ತು ಕುಟುಂಬಕ್ಕೆ ಸರ್ಕಾರದಿಂದ ಒದಗಿಸಬೇಕಾದ ಪುನರ್ವಸತಿ ಕಾರ್ಯದಲ್ಲಿ ಲೋಪವಾಗದಂತೆ ಎಚ್ಚರವಹಿಸಬೇಕು. ಹುಣಸೂರು, ಪಿರಿಯಾಪಟ್ಟಣ ಮತ್ತು ಎಚ್.ಡಿ.ಕೋಟೆ ಭಾಗಗಳಿಂದ ಪಕ್ಕದ ಕೊಡಗು ಜಿಲ್ಲೆಯ ಎಸ್ಟೇಟ್‌ಗಳಿಗೆ ಕೂಲಿಯಾಳುಗಳಾಗಿ ದುಡಿಯಲು ಹೋಗುವವರ ಕುರಿತು ಗಮನಹರಿಸಿ. ಜೀತದಾಳುಗಳಾಗಿ ದುಡಿಸಿಕೊಳ್ಳುವ ಪ್ರಕರಣಗಳು ಕಂಡುಬಂದರೆ ಕೂಡಲೇ ಸೂಕ್ರ ಕ್ರಮಕೈಗೊಳ್ಳಬೇಕು. ಜೀತ ವಿಮುಕ್ತ ಕುಟುಂಬಕ್ಕೆ ಮನೆ, ನಿವೇಶನ ಇನ್ನಿತರ ಸೌಲಭ್ಯಗಳನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ಸೂಚಿಸಿದರು.

ಇದೇ ವೇಳೆ ವಿವಿಧ ತಾಲೂಕುಗಳ ಮೂವರಿಗೆ ಜೀತ ವಿಮುಕ್ತ ಬಿಡುಗಡೆ ಪತ್ರ ವಿತರಿಸಲಾಯಿತು. ಸಭೆಯಲ್ಲಿ ಸರಗೂರು ತಹಸೀಲ್ದಾರ್ ಮೋಹನಕುಮಾರಿ, ಹುಣಸೂರು ತಹಸೀಲ್ದಾರ್ ಜೆ.ಮಂಜುನಾಥ್, ಹುಣಸೂರು ಸಮಾಜ ಕಲ್ಯಾಣಾಧಿಕಾರಿ ಅಶೋಕ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net