ಗೊಜನೂರ ಗ್ರಾಪಂನಲ್ಲಿದೆ ಮೀಟಿಂಗ್ ಹಾಲ್, ಎಚ್‌ಡಿ ಟಿ.ವಿ!

23 LXR STORY
Published on

ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ಗೊಜನೂರ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಸಕಲ ಸೌಲಭ್ಯಗಳೊಂದಿಗೆ ಕಣ್ಮನ ಸೆಳೆಯುತ್ತಿದ್ದು, ತಾಲೂಕಿನಲ್ಲಿಯೇ ಮಾದರಿ ಕಟ್ಟಡ ಎಂಬ ಕೀರ್ತಿಗೆ ಭಾಜನವಾಗಿದೆ.
ತಾಲೂಕಿನ ಹಲವು ಗ್ರಾಪಂಗಳಿಗೆ ಸ್ವಂತ ಕಟ್ಟಡ ಇಲ್ಲ. ಕೆಲವು ಗ್ರಾಮ ಚಾವಡಿ, ಕೆಲವು ಸಮುದಾಯ ಭವನಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಗೊಜನೂರ ಗ್ರಾಪಂ ನೂತನ ಕಟ್ಟಡ ಭವ್ಯಸೌಧದಂತೆ ಕಂಗೊಳಿಸುತ್ತಿದೆ.
ಗೊಜನೂರ, ಅಕ್ಕಿಗುಂದ, ಅಕ್ಕಿಗುಂದ ತಾಂಡಾ ಒಳಗೊಂಡು ಒಟ್ಟು ೧೩ ಸದಸ್ಯರಿರುವ ಗ್ರಾಪಂ ಕಾರ್ಯಾಲಯ ಗ್ರಾಮದ ಸಮುದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸ್ವಂತ ಕಟ್ಟಡಕ್ಕಾಗಿ ಶಾಸಕರು, ಮಾಜಿ ಶಾಸಕರು, ತಹಸೀಲ್ದಾರ್, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಕಾರ, ಇಚ್ಛಾಶಕ್ತಿಯಿಂದ ಸುಂದರ ಕಟ್ಟಡ ನಿರ್ಮಾಣವಾಗಿದೆ.
ಕಟ್ಟಡದಲ್ಲಿ ಏನೇನಿದೆ: ಹೈಟೆಕ್ ಕೊಠಡಿಗಳು ಕಟ್ಟಡಕ್ಕೆ ಮೆರುಗು ನೀಡಿವೆ. ಒಂದು ಗ್ರಾಪಂ ಕಚೇರಿ ಹೀಗೂ ಇರಬಹುದಾ ಎಂಬುದಕ್ಕೆ ಸಾಕ್ಷಿಯಾಗಿದೆ. ಕಚೇರಿ ಕೆಲಸಕ್ಕಾಗಿ ಬರುವ ಜನ ಕುಳಿತುಕೊಳ್ಳಲು ಸೂಕ್ತವಾದ ಸಭಾಂಗಣ, ಮೀಟಿಂಗ್ ಹಾಲ್, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಪ್ರತ್ಯೇಕ ಕೊಠಡಿ, ಯುಪಿಎಸ್ ಸೌಲಭ್ಯವಿರುವ ಕಂಪ್ಯೂಟರ್ ಕೊಠಡಿ, ಕುಡಿಯುವ ನೀರು, ಶೌಚಗೃಹ, ಬೆಳಕಿನ ವ್ಯವಸ್ಥೆ ಎಲ್ಲವೂ ವ್ಯವಸ್ಥಿತವಾಗಿವೆ. ಸಿಸಿ ರಸ್ತೆ, ಕುಡಿಯುವ ನೀರು, ಹೈಟೆಕ್ ಶೌಚಗೃಹ, ಎಚ್‌ಡಿ ಟಿವಿ, ರೆಕಾರ್ಡ್ ರೂಂ, ತರಬೇತಿ ಕೇಂದ್ರಗಳು ಇಲ್ಲುಂಟು. ಉದ್ಯಾನ ಮತ್ತು ಕಾಂಪೌಂಡ್ ನಿರ್ಮಾಣಕ್ಕೂ ಪ್ರತ್ಯೇಕ ಯೋಜನೆ ಸಿದ್ಧವಾಗಿದೆ.
ಮೊದಲು ಗ್ರಾಪಂ ಕಚೇರಿ ಸಮುದಾಯ ಭವನದ ಕಟ್ಟಡದಲ್ಲಿತ್ತು. ಯಾವುದೇ ಸೌಲಭ್ಯಗಳಿರಲಿಲ್ಲ. ಸುಂದರ, ಸುಸಜ್ಜಿತ, ಗುಣಮಟ್ಟದ ಗ್ರಾಪಂ ಕಟ್ಟಡ ನಿರ್ಮಾಣವಾಗುವಲ್ಲಿ ಈಗಿನ, ಹಿಂದಿನ ಸದಸ್ಯರು, ಗ್ರಾಮದ ಹಿರಿಯರು, ಅಧಿಕಾರಿಗಳು ಕಾರಣರಾಗಿದ್ದಾರೆ. ಎಲ್ಲರೂ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷೆ ನೀಲವ್ವ ಮಾದರ, ಉಪಾಧ್ಯಕ್ಷ ಮಹಾಂತಗೌಡ ಪಾಟೀಲ.

ಈ ಕಟ್ಟಡದಲ್ಲಿ ಗ್ರಾಮ ಮಟ್ಟದ ಎಲ್ಲ ಕಾರ್ಯಾಲಯಗಳಿಗೆ ಸ್ಥಳಾವಕಾಶ ನೀಡಲಾಗಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಗ್ರಾಪಂ ಅಧ್ಯಕ್ಷ, ಸದಸ್ಯರು, ಗ್ರಾಮಸ್ಥರ ಸಹಕಾರದಿಂದ ಈ ಮಹಾತ್ಕಾರ್ಯ ಸಾಕಾರಗೊಂಡಿದೆ. ಗ್ರಾಪಂ ಆಡಳಿತ ಕೇಂದ್ರವನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ.ಕೃಷ್ಣಪ್ಪ ಧರ್ಮರ, ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net