ಭೂದಾಖಲೆ ಹೊಂದಿರುವವರನ್ನು ಓಕ್ಕಲೆಬ್ಬಿಸಬೇಡಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

Meeting for Mines and Forests Department Mandya
Published on

ಮಂಡ್ಯ: ಅರಣ್ಯ ಪ್ರದೇಶದಲ್ಲಿ ದಶಕದ ಹಿಂದಿನಿಂದಲೂ ಸಮರ್ಪಕವಾದ ಭೂ ದಾಖಲೆಗಳೊಂದಿಗೆ ವಾಸಿಸುತ್ತಿರುವ ಜನರನ್ನು ಅರಣ್ಯಾಧಿಕಾರಿಗಳು ಓಕ್ಕಲೆಬ್ಬಿಸುವ ಪ್ರಯತ್ನ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಅರಣ್ಯ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವೆಲ್ಲರೂ ರೈತಾಪಿ ಕುಟುಂಬದಿಂದ ಬಂದವರು. ಹಾಗಾಗಿ ಹಳ್ಳಿಯ ಜೀವನಶೈಲಿ ನಮಗೆ ಹೊಸತಲ್ಲ. ಅರಣ್ಯಪ್ರದೇಶದಲ್ಲಿ ಜೀವನೋಪಾಯ ನಡೆಸುತ್ತಿರುವ ಜನರ ಮೇಲೆ ಅಧಿಕಾರಿಗಳು ಒತ್ತಡ ಏರಬೇಡಿ ಎಂದು ಹೇಳಿದರು.

ಈಗಾಗಲೇ ಸರ್ಕಾರದಿಂದಲೇ ಜಾಗ ಗುರುತಿಸಿ ಅವರಿಗೆ ಭೂಮಿ(ಹಕ್ಕು) ಪತ್ರ ನೀಡಲಾಗಿದೆ. ಅಂತಹ ಸ್ಥಳಗಳನ್ನು ಕೈಬಿಟ್ಟು ಉಳಿದ ಅರಣ್ಯ ಪ್ರದೇಶ ಗುರುತಿಸಿ ಸರ್ವೇ ನಡೆಸಿ. ಅರಣ್ಯಾಧಿಕಾರಿಗಳು ಕಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಡುವ ಕಾರ್ಯ ಕೈಗೊಳ್ಳಿ. ಅನೇಕ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಇರುತ್ತದೆ. ಅದರಿಂದ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಸರ್ಕಾರದಿಂದ ಅವರಿಗೆ ನೀಡಲಾಗಿರುವ ನಿವಾಸಗಳಲ್ಲಿ ಕಡ್ಡಾಯವಾಗಿ ವಾಸಿಸಬೇಕು. ಅಹಿತಕರ ಘಟನೆಗಳು ನಡೆದ ಸಂದರ್ಭದಲ್ಲಿ ಅಂತಹ ಪ್ರಕರಣಗಳನ್ನು ಹತ್ತಿಕುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಗಣಿ ಅಧಿಕಾರಿಗಳು ಹೆಚ್ಚಿನ ದಕ್ಷತೆಯಿಂದ ಕಾರ್ಯ ನಿರ್ವಹಿಸಿ. ಅನುಮತಿ ಇಲ್ಲದೆ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆ ಅಥವಾ ಭೂ ಸಂಪತ್ತನ್ನು ಲೂಟಿ ಮಾಡುವ ಪ್ರಕರಣ ನಡೆಯದಂತೆ ಕಟ್ಟುನಿಟ್ಟಿನ ಕ್ರಮವಹಿಸಿ. ಒಂದು ವೇಳೆ ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮದ್ದೂರಿನ ಶಿಂಷಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ ಎಂದು ಮಾಹಿತಿ ಇದೆ. ಪ್ರಸ್ತುತ 17ಕ್ಕೂ ಹೆಚ್ಚು ಮರಳು ದಂಧೆ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮ ಜಾರಿಗೊಳಿಸಲಾಗಿದೆ. ಗಣಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಅಕ್ರಮ ಮರಳು ಸಾಗಾಣಿಕೆಗೆ ತಿಲಾಂಜಲಿ ಬಿಡಬೇಕು. ಅರಣ್ಯ ಪ್ರದೇಶದಲ್ಲಿ ಸೂಕ್ತ ದಾಖಲೆಗಳೊಂದಿಗೆ ವಾಸಿಸುತ್ತಿರುವ ಜನರನ್ನು ಓಕ್ಕಲೆಬ್ಬಿಸದೆ ಸಾಧ್ಯವಾದಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ. ಇಂತಹ ಸೂಕ್ಷ್ಮ ಪ್ರಕರಣಗಳನ್ನು ಕಾನೂನು ದೃಷ್ಟಿಯ ಜತೆಗೆ ಮಾನವಿಯತೆಯಿಂದಲೂ ನೋಡಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಅರಣ್ಯ ಪ್ರದೇಶಗಳಲ್ಲಿ ಯಾರು ಯಾವುದೇ ರೀತಿಯ ಅನುಮತಿ ಇಲ್ಲದೆ ಸ್ಪೋಟಕ ವಸ್ತುಗಳನ್ನು ಬಳಸದಂತೆ ಕ್ರಮವಹಿಸಿ. ನಿಯಮ ಮೀರಿ ಯಾರಾದರೂ ದುಷ್ಕರ್ಮಿಗಳು ಸ್ಪೋಟಕಗಳನ್ನು ಸ್ಪೋಟಿಸಿದರೆ ಅಂತಹವರು ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ, ಶ್ರೀನಿವಾಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಆಧಿಕಾರಿ ಪುಷ್ಪಾ, ಜಿಲ್ಲಾ ಅರಣ್ಯಾಧಿಕಾರಿ ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net