

ಮಂಡ್ಯ: ಬಡವರಿಗೆ ಅನುಕೂಲವಾಗಲೆಂದು ಮಂಡ್ಯ ನಗರ ವ್ಯಾಪ್ತಿಯಲ್ಲಿ ಐದು ಸಾವಿರ ಮನೆ ನಿರ್ಮಾಣ ಮಾಡಬೇಕೆಂಬ ಶಾಸಕ ರವಿಕುಮಾರ್ ಗಣಿಗ ಅವರ ಮನವಿಗೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸಮ್ಮತಿ ನೀಡಿದ್ದಾರೆ.
ಬೆಂಗಳೂರಿನ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್‌ನಲ್ಲಿ ವಸತಿ ಸಚಿವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಅದರಂತೆ 5 ಸಾವಿರ ಮನೆ ನಿರ್ಮಾಣ ಮಾಡಲು ಆರ್ಥಿಕ ನೆರವು ನೀಡುವುದಾಗಿ ಸಚಿವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ಗೇಟ್ ಅಥವಾ ನಗರದ ಹೊರವಲಯದಲ್ಲಿ 15 ಎಕರೆ ಸರ್ಕಾರಿ ಜಾಗ ನೀಡುವುದಾಗಿ ಶಾಸಕರು ಸಭೆಗೆ ತಿಳಿಸಿದ್ದಾರೆ. ಅತ್ಯಾಧುನಿಕ ಹೈಟೆಕ್ ಜಿ ಫ್ಲಸ್ ಮಾದರಿಯ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲು ಅನುಮೋದನೆ ಪಡೆದುಕೊಳ್ಳಲಾಗಿದೆ.
ಇದಲ್ಲದೆ ಹಾಲಹಳ್ಳಿ ಸ್ಲಂ ಬೋರ್ಡ್‌ನಲ್ಲಿ 80 ಮನೆ ನಿರ್ಮಾಣ ಮಾಡಲು 2.50 ಕೋಟಿ ರೂ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಮಾತ್ರವಲ್ಲದೆ ಎರಡೂವರೆ ಎಕರೆಯಲ್ಲಿ ನೂತನವಾಗಿ 500 ಮನೆ ನಿರ್ಮಾಣ ಮಾಡಲು ಕ್ರಮ ವಹಿಸಲು ಸೂಚಿಸಿದ್ದಾರೆ. ಕಳೆದ 75 ವರ್ಷದಿಂದ ಆರ್‌ಟಿಒ ಸ್ಲಂ ಹಾಗೂ ಹಾಲಹಳ್ಳಿ ಮುಸ್ಲಿಂ ಬ್ಲಾಕ್ ನಿವಾಸಿಗಳು ಹಕ್ಕು ಪತ್ರದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಕೂಡಲೇ ಹಕ್ಕುಪತ್ರ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ನೀಡಿದ್ದಾರೆ. ಒಟ್ಟಾರೆ ನಗರದಲ್ಲಿರುವ ಎಲ್ಲ ಸ್ಲಂಗಳಿಗೂ ಮೂಲ ಸೌಕರ್ಯ ಒದಗಿಸಲು ವಿಶೇಷ ಅನುದಾನ ಪಡೆದುಕೊಳ್ಳುವ ಮೂಲಕ ಅಲ್ಪಸಂಖ್ಯಾತರ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯೊನ್ಮುಖರಾಗುವಂತೆ ತಿಳಿಸಿದ್ದಾರೆ.
ಸಭೆಯಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಂ ಸೇರಿದಂತೆ ವಸತಿ ಇಲಾಖೆ ಅಧಿಕಾರಿಗಳಿದ್ದರು.
ನ್ಯಾಯಾಲಯಕ್ಕೆ ಮೊರೆ ನಗರದ ಬೀಡಿ ಕಾಲನಿಯಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ವಸತಿ ರಹಿತರಿಗೆ ವಿತರಣೆ ಮಾಡುವ ಸದುದೇಶದಿಂದ ನ್ಯಾಯದಲ್ಲಿ ಅಫಿಡೇವಿಟ್ ಸಲ್ಲಿಸಲು ಸಭೆಯಲ್ಲಿ ಅನುಮತಿ ಪಡೆಯಲಾಗಿದೆ. ಸರ್ಕಾರದಿಂದ 600 ಮನೆ ನಿರ್ಮಾಣ ಮಾಡಲಾಗಿದ್ದು, ಅಲ್ಲಿಗೆ ತಮಿಳು ಕಾಲನಿ ನಿವಾಸಿಗಳು ಸ್ಥಳಾಂತರವಾಗುತ್ತಿಲ್ಲ. ಆದ್ದರಿಂದ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು. ತಮಿಳು ಕಾಲನಿ ನಿವಾಸಿಗಳು ಅಲ್ಲಿಗೆ ಹೋಗದಿದ್ದರೆ ಬೇರೆಯವರಿಗೆ ನೀಡಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅಫಿಡೇವಿಟ್ ಸಲ್ಲಿಸಲಾಗುತ್ತಿದೆ.
ಮಂಡ್ಯ ನಗರ ವ್ಯಾಪ್ತಿಯಲ್ಲಿ ಐದು ಸಾವಿರ ಮನೆ ನಿರ್ಮಾಣಕ್ಕೆ ಸಚಿವರು ಒಪ್ಪಿಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸಾಧ್ಯವಾದಷ್ಟು ತ್ವರಿತವಾಗಿ ಕಾಮಗಾರಿಯನ್ನು ಆರಂಭ ಮಾಡಲಾಗುವುದು. ಅಂತೆಯೇ ಹಕ್ಕುಪತ್ರದಿಂದ ವಂಚಿತರಾಗಿರುವ ಸಾಕಷ್ಟು ಜನರಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಅವರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು. ರವಿಕುಮಾರ್ ಗಣಿಗ ಶಾಸಕ