ಪಳನಿಸ್ವಾಮಿದೊಡ್ಡಿ ಗ್ರಾಮದಲ್ಲಿ ಸಭೆ ರದ್ದು

26 HANUR 2
ಪಳನಿಸ್ವಾಮಿ ದೊಡ್ಡಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಮಹಿಳೆಯರು.
Published on

ಹನೂರು: ಗ್ರಾಮಸ್ಥರಿಗೆ ಮಾಹಿತಿ ನೀಡದ ಕಾರಣ ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಳನಿಸ್ವಾಮಿ ದೊಡ್ಡಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಸಭೆ ರದ್ದಾಗಿದೆ.

ಗ್ರಾಮದ ಮಾರಮ್ಮನ ದೇಗುಲದ ಸಮೀಪದಲ್ಲಿ ಗ್ರಾಪಂ ಅಧ್ಯಕ್ಷೆ ಕಮಲಮ್ಮ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಗಂಟೆಗೆ ಗ್ರಾಮಸಭೆ ಆಯೋಜಿಸಲಾಗಿತ್ತು. ತಾಲೂಕು ಪಂಚಾಯಿತಿ ನರೇಗಾ ಸಂಯೋಜಕ ಸಿದ್ದಪ್ಪ, ಪಿಡಿಒ ಅಶ್ವಿನಿ, ಕೆಲ ಜನಪ್ರತಿನಿಧಿಗಳು, ಲೆಕ್ಕ ತಪಾಸಣೆಯ ಸಿಬ್ಬಂದಿ ಹಾಗೂ ಗ್ರಾಪಂ ನೌಕರರು ಆಗಮಿಸಿದ್ದರು. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಗ್ರಾಮಸ್ಥರು ಭಾಗವಹಿಸಿರಲಿಲ್ಲ. ವಿಷಯ ತಿಳಿದು ಸಭೆಗೆ ಆಗಮಿಸಿದ ನಾಲ್ಕೈದು ಜನ ಗ್ರಾಮಸ್ಥರು ಸಭೆಯ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಆಯೋಜಿಸುವ ಮೊದಲು ಗ್ರಾಮಸ್ಥರಿಗೆ ತಿಳಿಸಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಬಳಿಕ ಸುಮಾರು ಒಂದು ಗಂಟೆ ಕಾಲ ಅಧಿಕಾರಿಗಳು ಕಾದುಕುಳಿತರು. ಆದರೂ, ಜನರು ಅತ್ತ ಸುಳಿಯದ ಕಾರಣ ಅಧಿಕಾರಿಗಳು ತಮ್ಮ ಕಚೇರಿಗೆ ಹಿಂದಿರುಗಿದರು.

ಈ ಸಂಬಂಧ ಗ್ರಾಮದ ಸುಮಿತ್ರಾ ಹಾಗೂ ಪವನ ಅವರು ವಿಜಯವಾಣಿಯೊಂದಿಗೆ ಮಾತನಾಡಿ, ಗ್ರಾಮಸಭೆ ನಡೆಸುವ ಬಗ್ಗೆ ಗ್ರಾಮದಲ್ಲಿ ನಮಗೂ ಸೇರಿದಂತೆ ಯಾರಿಗೂ ತಿಳಿಸಿಲ್ಲ. ಇದೀಗ ಅಧಿಕಾರಿಗಳು ಗ್ರಾಮಕ್ಕೆ ದಿಢೀರ್ ಆಗಮಿಸಿ ಗ್ರಾಮಸಭೆಗೆ ಬನ್ನಿ ಎಂದು ತಿಳಿಸಿದರೆ ಕೆಲಸ ಕಾರ್ಯಗಳ ನಿಮಿತ್ತ ತೆರಳಿವವರು ಯಾರು ತಾನೇ ಬರಲು ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು.

ಜನರು ಆಗಮಿಸದ ಕಾರಣ ಗ್ರಾಮಸಭೆ ರದ್ದುಪಡಿಸಲಾಗಿದೆ ಎಂದು ಪಿಡಿಒ ಅಶ್ವಿನಿ ತಿಳಿಸಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ಸಭೆ ನಡೆಸುವ ದಿನ ನಿಗದಿ ಮಾಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net