ಅಧಿಕಾರಿಗಳು ಗೈರು, ಗ್ರಾಮಸಭೆ ರದ್ದು

19 yelandur 01
Published on

ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಮಂಗಳವಾರ ಆಯೋಜನೆಯಾಗಿದ್ದ ಗ್ರಾಮಸಭೆಯು ಅಧಿಕಾರಿಗಳು ಗೈರಾಗಿರುವ ಕಾರಣ ರದ್ದಾಯಿತು.
ಸಾಮಾಜಿಕ ಲೆಕ್ಕ ಪರಿಶೋಧನೆ, ಜಮಾಬಂದಿಗಾಗಿ ಗ್ರಾಮಸಭೆಯನ್ನು ಆಯೋಜನೆ ಮಾಡಲಾಗಿತ್ತು. ಆದರೆ ಈ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಬರಲೇ ಇಲ್ಲ . ಅಧಿಕಾರಿಗಳೇ ಗೈರಾದರೆ ನಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳಿಕೊಳ್ಳುವುದು, ನರೇಗಾದಡಿಯಲ್ಲಿ ಅನೇಕ ಲೋಪಗಳು ನಡೆದಿವೆ. ಆದರೆ ಸಂಬಂಧಪಟ್ಟ ಜೆಇ ಸಭೆಯಲ್ಲಿ ಹಾಜರಾಗಿಲ್ಲ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಹಾಗಾಗಿ ಸಭೆ ಮುಂದೂಡಿ ಎಂದು ಪಟ್ಟು ಹಿಡಿದರು.
ನೋಡಲ್ ಅಧಿಕಾರಿ ಮಲ್ಲಿಕಾರ್ಜುನ ಪ್ರತಿಕ್ರಿಯಿಸಿ, ಗ್ರಾಮಸಭೆಗೆ ಎಲ್ಲಾ ಇಲಾಖೆಗಳಿಗೂ ಈ ಮುಂಚೆ ಮಾಹಿತಿ ನೀಡಲಾಗಿದೆ. ಆದರೆ ಕೆಲವರು ಗೈರಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಭೆಯನ್ನು ಇದೇ ತಿಂಗಳ 27 ಕ್ಕೆ ನಡೆಸಲು ತೀರ್ಮಾನಿಸಲಾಗಿದೆ ಎಂದರು. ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಾಗುವಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿ ಸಭೆಯನ್ನು ಮುಂದೂಡಿದರು. ಪಿಡಿಒ ಲಲಿತಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net