

ತಿ.ನರಸೀಪುರ: ಅಧಿಕಾರಿಗಳು ಗೈರಾಗಿದ್ದಕ್ಕೆ ವೀರಶೈವ ಲಿಂಗಾಯತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಭೆಯಿಂದ ಹೊರ ನಡೆದ್ದರಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ಹಾಗೂ ಶ್ರೀ ಭಗೀರಥ ಜಯಂತಿ ಪೂರ್ವಭಾವಿ ಸಭೆಯನ್ನು ಮುಂದೂಡಲಾಯಿತು.
ನಾಡಿನ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರು ಮತ್ತು ಭಗೀರಥ ಜಯಂತಿ ಕಾರ್ಯಕ್ರಮ ಆಯೋಜಿಸಲು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ್ದ ಪೂರ್ವಭಾವಿ ಸಭೆಗೆ ತಾಲೂಕು ಮಟ್ಟದ ಹಲವು ಅಧಿಕಾರಿಗಳು ಗೈರಾಗಿದ್ದರು.
ಹೀಗಾಗಿ ಸಭೆಯ ಆರಂಭದಲ್ಲಿಯೇ ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಅಸಮಾಧಾನ ವ್ಯಕ್ತಪಡಿಸಿ, ಸಭೆಯನ್ನು ಬಹಿಷರಿಸುತ್ತಿದ್ದೇವೆ ಎಂದು ಹೊರ ನಡೆದರು. ಅವರನ್ನು ನಿರ್ಧಾರವನ್ನು ಬೆಂಬಲಿಸಿ, ವೀರಶೈವ ಲಿಂಗಾಯತ ಮುಖಂಡರು ಸಭೆಯಿಂದ ನಿರ್ಗಮಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಮತ್ತೊಂದು ದಿನಕ್ಕೆ ಮುಂದೂಡಲು ತೀರ್ಮಾನಿಸಲಾಯಿತು. ವೀರಶೈವ ಲಿಂಗಾಯತ ಮುಖಂಡರ ನಿರ್ಧಾರಕ್ಕೆ ಉಪ್ಪಾರ ಸಮುದಾಯದ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.
ತಾಪಂ ಮಾಜಿ ಉಪಾಧ್ಯಕ್ಷ ಭೀಮರಾಯ ಮಾತನಾಡಿ, ಬಸವಣ್ಣ ಮತ್ತು ಭಗೀರಥರ ಜಯಂತಿ ಕಾರ್ಯಕ್ರಮಕ್ಕೆ ಅಧಿಕಾರಿಗಳು ಹಾಜರಾಗದೆ ನಿರ್ಲಕ್ಷ ತೋರುತ್ತಿದ್ದಾರೆ. ಇಂತಹ ಪ್ರವೃತ್ತಿಯನ್ನು ತಾಲೂಕು ಮಟ್ಟದ ಅಧಿಕಾರಿಗಳು ಬಿಡಬೇಕು. ಎಲ್ಲ ಅಧಿಕಾರಿಗಳನ್ನು ಸಭೆಗೆ ಕರೆಯಿಸಿ ಪೂರ್ವಭಾವಿ ಸಭೆ ಮಾಡಬೇಕು ಎಂದು ಆಗ್ರಹಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿ, ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಜಿಲ್ಲಾಧಿಕಾರಿಗಳಿಗೆ ಅಂತಹವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ. ತಾಲೂಕು ಮಟ್ಟದ ಅಧಿಕಾರಿಗಳ ಕಡ್ಡಾಯ ಹಾಜರಾತಿಯೊಂದಿಗೆ ಏ.21ರ ಸೋಮವಾರ ಇಬ್ಬರು ಮಹಾ ನಾಯಕರ ಜಯಂತಿ ಆಚರಣೆ, ಪೂರ್ವಭಾವಿ ಸಭೆಯನ್ನು ನಡೆಸಲಾಗುವುದು ತಿಳಿಸಿದರು.
ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿ ಹೊರಬಂದ ವೀರಶೈವ, ಲಿಂಗಾಯತ ಹಾಗೂ ಉಪ್ಪಾರ ಸಮುದಾಯದ ಮುಖಂಡರು ಪ್ರತಿಕ್ರಿಯಿಸಿ, ಅಧಿಕಾರಿಗಳು ಬಸವೇಶ್ವರರು ಮತ್ತು ಭಗಿರಥರ ಜಯಂತಿ ಪೂರ್ವಭಾವಿ ಸಭೆಗೆ ಹಾಜರಾಗದೆ ನಿರ್ಲಕ್ಷ್ಯ ಧೋರಣೆಗೆ ಖಂಡನೆ ವ್ಯಕ್ತಪಡಿಸಿ, ಸಭೆ ಬಹಿಸ್ಕರಿಸಿ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಇದೇ ನಿರ್ಲಕ್ಷೃ ಮುಂದುವರೆದರೆ ಅಧಿಕಾರಿಗಳ ವಿರುದ್ಧ
ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿಎಂ.ಪ್ರಕಾಶ್, ಉಪಾಧ್ಯಕ್ಷರಾದ ಎಸ್.ಕೆ.ಕಿರಣ್, ಬಿ.ಎಂ.ಶಿವಮಲ್ಲಪ್ಪ, ಕೋಶಾಧ್ಯಕ್ಷ ದೊಡ್ಡನಹುಂಡಿ ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಕುರುಬೂರು ಶಿವಶಂಕರ್, ಕಿರಗಸೂರು ಸುರೇಶ್, ಜೆಡಿಎಸ್ ಅಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಸುಗಂಧರಾಜು, ಉಪಾಧ್ಯಕ್ಷ ಕೆಇಬಿ ಸಿದ್ದಲಿಂಗಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ತಾಲೂಕು ಉಪ್ಪಾರ ಸಂಘದ ಗೌರವಾಧ್ಯಕ್ಷ ಕೃಷ್ಣಾಪುರ ರಾಮ್ ಶೆಟ್ಟಿ, ಉಪ್ಪಾರ ಮಹಾಸಭಾದ ಅಧ್ಯಕ್ಷ ಕಾವೇರಿಪುರ ಮಹದೇವಶೆಟ್ಟಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ್, ಪುರಸಭಾ ಸದಸ್ಯ ರೂಪಶ್ರೀ ಪರಮೇಶ್, ಮಾಜಿ ಸದಸ್ಯ ಎನ್.ಲೋಕೇಶ್, ತಾ.ಪಂ. ಮಾಜಿ ಸದಸ್ಯ ಮೂಗೂರು ಚಂದ್ರಶೇಖರ್, ಶ್ರೀ ಶಿವಕುಮಾರಸ್ವಾಮಿಗಳ ಸೇವಾ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ, ಸಂಚಾಲಕ ಮಾಯಪ್ಪ, ಗ್ರಾಮ ಪಂಚಾಯತಿ ಸದಸ್ಯ ಕಿರಗಸೂರು ಮಹದೇವಸ್ವಾಮಿ, ಮುಖಂಡರಾದ ತುರಗನೂರು ರಾಜಣ್ಣ, ಕೆಬ್ಬೆಹುಂಡಿ ಶಿವಕುಮಾರ್, ಕಾವೇರಿಪುರ ಮಲ್ಲು, ನಟರಾಜು, ಮಂಜುನಾಥ್, ಸುಗದರಾಜು, ನಾಗಭೂಷಣ, ಉಪ್ಪಾರ ಸಂಘದ ಅರ್.ಮಾದೇಶ್, ಕಾವೇರಿಪುರ ಶಾಂತರಾಜು, ಕನ್ನಹಳ್ಳಿ ಮೋಳೆ ಮಹದೇವಶೆಟ್ಟಿ, ಕೆಂಪಯ್ಯಹುಂಡಿ ರಾಜೇಂದ್ರ, ರಾಜಣ್ಣ, ಮಹೇಶ್, ಕೇತಹಳ್ಳಿ ಸಿದ್ದಶೆಟ್ಟಿ, ಕಲ್ಲೂರು ಸೋಮಣ್ಣ, ಹಾಗೂ ಇತರರು ಇದ್ದರು.