ಸದಸ್ಯರ ಗಮನಕ್ಕೆ ತಾರದೆ ಮಳಿಗೆ ಹರಾಜಿಗೆ ದಿನ ನಿಗದಿ

17spt1
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯರು ಮಳಿಗೆ ಹರಾಜು ವಿಚಾರವಾಗಿ, ಆಡಳಿತಾಧಿಕಾರಿ ತಪ್ಪೆಸಿಗಿದ್ದಾರೆ ಎಂದು ಸದಸ್ಯರು ಶಾಸಕ ಡಾ.ಮಂತರ್‌ಗೌಡ ಅವರಿಗೆ ಮನವರಿಕೆ ಮಾಡಿದರು. ಚಂದ್ರು, ಸಂಜೀವ, ಶೀಲಾ, ಮಹೇಶ್, ಜಯಂತಿ ಇದ್ದರು.
Published on

ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 60 ಅಂಗಡಿ ಮಳಿಗೆ ಹರಾಜು ಕುರಿತು ಶಾಸಕ ಡಾ.ಮಂತರ್‌ಗೌಡ ಸಮ್ಮುಖದಲ್ಲಿ ಶನಿವಾರ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಯಿತು.

ಪಂಚಾಯಿತಿ ಸದಸ್ಯರ ಗಮನಕ್ಕೆ ತಾರದೆ, ಡಿ.21ಕ್ಕೆ ಮಳಿಗೆ ಹರಾಜು ದಿನಾಂಕವನ್ನು ಆಡಳಿತಾಧಿಕಾರಿ ನಿಗದಿಪಡಿಸಿದ್ದಾರೆ. ಇದು ಜನಪ್ರತಿನಿಧಿಗಳಿಗೆ ಮಾಡಿದ ಅವಮಾನವಾಗಿದೆ. ಹೀಗಾಗಿ ಹರಾಜು ದಿನಾಂಕವನ್ನು ಮುಂದೂಡುವಂತೆ ಬಿ.ಸಂಜೀವ, ಬಿ.ಆರ್.ಮಹೇಶ್, ಮೃತ್ಯುಂಜಯ, ಪಿ.ಕೆ.ಚಂದ್ರು, ಶುಭಕರ್ ಮತ್ತಿತರ ಸದಸ್ಯರು ಒತ್ತಾಯಿಸಿದರು.

ಈ ಹಿಂದೆ ಶಾಸಕರ ಉಪಸ್ಥಿತಿಯಲ್ಲಿ ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹರಾಜು ಮಾಡುವ ಮುನ್ನ ಈಗಿರುವ ವರ್ತಕರಿಗೆ ಅಂಗಡಿಗಳನ್ನು ಮುಂದುವರಿಸುವ ಬಗ್ಗೆ ಸರ್ಕಾರದ ಅಭಿಪ್ರಾಯ ಕೇಳಲು ನಿರ್ಧರಿಸಲಾಗಿತ್ತು. ಈಗ ಅಧಿಕಾರಿಗಳೇ ಹರಾಜು ದಿನಾಂಕ ನಿರ್ಧರಿಸಿದ್ದಾರೆ. ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಹಾಗೂ ಶಾಸಕರ ಅಭಿಪ್ರಾಯಕ್ಕೂ ಬೆಲೆ ನೀಡಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಅಂದಿನ ಸಭೆಯಲ್ಲಿ ಹರಾಜು ವಿಚಾರ ಪ್ರಸ್ತಾಪಗೊಂಡು ಸರ್ಕಾರದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಲಾಗಿತ್ತು. ನಂತರದ ದಿನಗಳಲ್ಲಿ ಟೆಂಡರ್‌ಗೆ ದಿನಾಂಕ ಮಾಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಆಡಳಿತಾಧಿಕಾರಿಯಿಂದ ಸ್ಪಷ್ಟನೆ ಕೇಳಿದರು. ಆಡಳಿತಾಧಿಕಾರಿ ನರಗುಂದ್ ಅವರು, ಸರ್ಕಾರದ ಮಾರ್ಗಸೂಚಿಯಂತೆ ಟೆಂಡರ್‌ಗೆ ದಿನಾಂಕ ನಿಗದಿ ಮಾಡುವ ಅನಿವಾರ್ಯತೆ ಇತ್ತು. ಹಾಗಾಗಿ ದಿನಾಂಕ ನಿಗದಿ ಮಾಡಲಾಗಿದೆ ಎಂದು ಆಡಳಿತಾಧಿಕಾರಿ ನರಗುಂದ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಹಿಂದಿನ ಸಭೆಯಲ್ಲಿ ಶಾಸಕರ ಉಪಸ್ಥಿತಿಯಲ್ಲಿಯೇ ಚರ್ಚೆ ನಡೆದು, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪತ್ರ ಬರೆದು ಈಗಿರುವವರಿಗೆ ಬಾಡಿಗೆ ಹಾಗೂ ಮುಂಗಡ ಹಣವನ್ನು ಹೆಚ್ಚಿಸಿ ಮಳಿಗೆ ನೀಡಲು ಅವಕಾಶ ಇದೆಯೇ ಎಂಬ ಬಗ್ಗೆ ಸ್ಪಷ್ಟನೆ ಕೇಳಲು ತೀರ್ಮಾನಿಸಲಾಗಿತ್ತು. ಅದನ್ನು ಮುಚ್ಚಿಟ್ಟು ಹರಾಜು ನಿಗದಿಪಡಿಸಿ ಪ್ರಕಟಣೆ ಹೊರಡಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಳಿಗೆ ಹರಾಜು ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರು ತಮ್ಮ ಅಭಿಪ್ರಾಯದ ಪತ್ರ ನೀಡಲಿ. ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗುವುದು. ಅಂತಿಮವಾಗಿ ಸರ್ಕಾರದ ನಿಯಮಕ್ಕೆ ಎಲ್ಲರೂ ಒಳಪಡಬೇಕಿದೆ ಎಂದರು.

ಸಭೆಯಲ್ಲಿ ಸದಸ್ಯರಾದ ಶೀಲಾ ಡಿಸೋಜ, ಜಯಂತಿ ಶಿವಕುಮಾರ್, ಜೀವನ್, ಮೋಹಿನಿ, ಮುಖ್ಯಾಧಿಕಾರಿ ನಾಚಪ್ಪ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net