

ಮಂಡ್ಯ: ಕೆಆರ್‌ಎಸ್ ಸುತ್ತಮುತ್ತ ಟ್ರಯಲ್ ಬ್ಲಾಸ್ಟ್‌ಗೆ ಅವಕಾಶ ನೀಡಬಾರದು. ಅಂತೆಯೇ ಅಣೆಕಟ್ಟು ಸುರಕ್ಷತಾ ಕಾಯ್ದೆ ಜಾರಿಗೆ ತಂದು ರೈತರನ್ನು ಉಳಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.
ನಗರದ ಗಾಂಧಿ ಭವನದಲ್ಲಿ ಜಿಲ್ಲಾ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಆಯೋಜಿಸಿದ್ದ ಟ್ರಯಲ್ ಬ್ಲಾಸ್ಟ್ ಬಗ್ಗೆ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿ, ಗಣಿ ಮಾಲೀಕರ ಒತ್ತಾಯಕ್ಕೆ ಮಣಿದು ಟ್ರಯಲ್ ಬ್ಲಾಸ್ಟ್‌ಗೆ ಮುಂದಾದರೆ ಕೆಆರ್‌ಎಸ್ ವ್ಯಾಪ್ತಿಯ ರೈತರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಲಾಗುವುದು. ಇಂತಹ ಹೋರಾಟವನ್ನು ಲಘುವಾಗಿ ಕಾಣಬಾರದು, ಪ್ರಮುಖ ಮುಖಂಡರ ಜತೆ ಚರ್ಚಿಸಿಯೇ ತೀರ್ಮಾನಿಸಲಾಗಿದೆ, ಟ್ರಯಲ್ ಬ್ಲಾಸ್ಟ್‌ನಿಂದ ಯಾರಿಗೆ ಅನುಕೂಲ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಬೇಕು. ಹಾಗೆಯೇ ಇದನ್ನು ವೈಜ್ಞಾನಿಕವಾಗಿಯೂ ತೋರಿಸಬೇಕು ಎಂದು ಆಗ್ರಹಿಸಿದರು.
ಕಾನೂನಾತ್ಮಕವಾಗಿ ನಮ್ಮ ಹೋರಾಟವಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕೆ ಕರೆ ನೀಡಿದಾಗ ಭಾಗವಹಿಸುವುದು ಮುಖ್ಯವಾಗಬೇಕು. ಎಲ್ಲರೂ ಸೇರಿ ಒಂದು ಪ್ರಬಲ ಹೋರಾಟವನ್ನು ಮಾಡಲು ನಿರ್ಧರಿಸಿದ್ದೇವೆ. ಪಕ್ಕದ ಜಿಲ್ಲೆಗಳಾದ ರಾಮನಗರ, ತುಮಕೂರು, ಹಾಸನ, ಬೆಂಗಳೂರು, ಮೈಸೂರು ಜನರೂ ಇದರ ಬಗ್ಗೆ ಆಸಕ್ತಿ ವಹಿಸಬೇಕು. ಏಕೆಂದರೆ ಕನ್ನಂಬಾಡಿ ಉಳಿಸಿಕೊಳ್ಳುವ ಜವಾಬ್ದಾರಿ ಜನತೆ ಮೇಲಿದೆ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಸರ್ಕಾರ ಟ್ರಯಲ್ ಬ್ಲಾಸ್ಟ್ ಮಾಡಲು ಉತ್ಸುಕವಾಗಿದೆ ಎಂಬ ಅಭಿಪ್ರಾಯವಿದೆ?. ನಾವು ಮಾಡಬೇಡಿ ಎಂದು ಹೇಳಿದರೂ ಕೇಳುವ ಸ್ಥಿತಿಯಲ್ಲಿಲ್ಲ. ಯಾವುದೇ ರಾಜಕೀಯ ಪಕ್ಷ ಬಂದರೂ ಅವರವರ ಇಚ್ಛಾಶಕ್ತಿ ಇಟ್ಟುಕೊಂಡು ಕೆಲಸ ಮಾಡುವ ಪರಿಸ್ಥಿತಿ ಇಲ್ಲ. ಸರ್ಕಾರಕ್ಕೂ ಅಂತಹ ಇಚ್ಚಾಶಕ್ತಿ ಇಲ್ಲದಿರುವುದರಿಂದ ನಾವು ಇದನ್ನು ಹೋರಾಟದ ಮುಖಾಂತರವೇ ಬಗೆಹರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಗತಿಪರ ಚಿಂತಕ ನಂಜರಾಜೇ ಅರಸ್ ಮಾತನಾಡಿ, ಅಧಿಕಾರಿಗಳಿಗೆ ಗಣಿಗಾರಿಕೆ ಬಗ್ಗೆ ಮೃದು ಧೋರಣೆ ಇದೆ. ಅಧಿಕಾರಿಗಳು ಏನು ಆಗಲ್ಲ ಎನ್ನುತ್ತಾರೆ. ಒಂದು ದಿನ ಟ್ರಯಲ್ ಬ್ಲಾಸ್ಟ್ ಮಾಡಿದರೆ ಏನೂ ಆಗಲ್ಲ. ಅನುಮತಿ ಸಿಕ್ಕ ನಂತರ 24 ಗಂಟೆನೂ ಗಣಿಗಾರಿಕೆ ನಡೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜನರನ್ನು ಬಲಿ ಕೊಡುವ ಈ ವ್ಯವಸ್ಥೆಯನ್ನು ವಿರೋಧಿಸುತ್ತೇವೆ. ಇದನ್ನು ಜನರೇ ಧಂಗೆ ಎದ್ದು ತಪ್ಪಿಸಬೇಕು ಎಂದರು.
ಸಭೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮುಖಂಡರಾದ ಪ್ರಸನ್ನ ಎನ್.ಗೌಡ, ಸಿ.ಕುಮಾರಿ, ಹುಲ್ಕೆರೆ ಮಹದೇವ್, ಕೆ.ಆರ್.ರವೀಂದ್ರ, ವಿಜಯ್‌ಕುಮಾರ್, ಲಿಂಗಪ್ಪಾಜಿ, ಪ್ರಿಯಾ ರಮೇಶ್, ಲತಾ ಶಂಕರ್, ಮಂಜು ಕೋಣನಹಳ್ಳಿ, ಟಿ.ಎಲ್.ಕೃಷ್ಣೇಗೌಡ ಇತರರಿದ್ದರು.