ಉಲೆಮಾ ಸಭೆಯಲ್ಲಿ ‘ಬೆಳಗ್ಗಿನ ಆಜಾನ್’ ತೀರ್ಮಾನ

ajan
Published on

ಉಡುಪಿ: ಆಜಾನ್ ವಿಷಯಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಧ್ವನಿವರ್ಧಕಗಳ ಡೆಸಿಬಲ್ ಕಡಿಮೆ ಮಾಡಲಾಗಿದೆ. ಆಜಾನ್ ವಿಷಯ ಶರಿಯತ್‌ಗೆ ಸಂಬಂಧಪಟ್ಟದ್ದು. ಹೀಗಾಗಿ ಬೆಳಗ್ಗಿನ ಜಾವ ಆಜಾನ್ ನಡೆಸುವುದು ಹೇಗೆ? ಎಂಬ ಬಗ್ಗೆ ಸೋಮವಾರ ಮತ್ತು ಮಂಗಳವಾರ ಉಡುಪಿ, ದ.ಕ.ಜಿಲ್ಲೆಯ ಎಲ್ಲ ಉಲೆಮಾಗಳ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್.ಕೆ.ಮೊಹಮ್ಮದ್ ಶಫಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ವಕ್ಫ್ ಮಂಡಳಿ ರಾಜ್ಯದ ಎಲ್ಲ ಮಸೀದಿಗಳಿಗೆ ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಧ್ವನಿವರ್ಧಕದ ಡೆಸಿಬಲ್ ಎಷ್ಟಿರಬೇಕು ಎಂಬ ಮಾಹಿತಿ ಒಳಗೊಂಡ ಸುತ್ತೋಲೆ ಹೊರಡಿಸಿದೆ. ಕೋರ್ಟ್ ಆದೇಶ ಪಾಲನೆ ಕರ್ತವ್ಯ ಎಂದರು.

ಹತ್ತು ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು: ಬೆಂಗಳೂರಿನಲ್ಲಿ ಮಂಡಳಿ ವತಿಯಿಂದ 15 ಕೋಟಿ ರೂ.ವೆಚ್ಚದಲ್ಲಿ ಐಎಎಸ್ ಮತ್ತು ಐಪಿಎಸ್ ಟ್ರೇನಿಂಗ್ ಸೆಂಟರ್ ಫಾರಂಭವಾಗಲಿದ್ದು, ಜೂನ್ ಮೊದಲ ವಾರದಲ್ಲಿ ಶಿಲಾನ್ಯಾಸ ನಡೆಯಲಿದೆ ಎಂದರು. ವಕ್ಫ್ ಮಂಡಳಿ ಕೇಂದ್ರ ಕಚೇರಿ ದುರಸ್ತಿಗೆ ಸರ್ಕಾರ 2 ಕೋಟಿ ರೂ.ಅನುದಾನ ನೀಡಿದೆ. 10 ಜಿಲ್ಲೆಗಳಲ್ಲಿ 10 ಮಹಿಳಾ ಕಾಲೇಜು ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಜಾಗ ಗುರುತಿಸಲಾಗಿದೆ. ವಕ್ಫ್ ಬೋರ್ಡ್ ಜಾಗ ಪ್ರಭಾವಿಗಳ ಪಾಲಾಗುತ್ತಿದೆ ಎಂಬ ಆರೋಪವಿದೆ. ಹೀಗಾಗಿ ರಾಜ್ಯ ಸರ್ಕಾರ ವಕ್ಫ್ ಆಸ್ತಿಗಳ ಡ್ರೋನ್ ಸರ್ವೆಗೆ 2.5 ಕೋಟಿ ರೂ.ಬಿಡುಗಡೆ ಮಾಡಿದೆ. ಈ ಜಾಗಳನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಮಂಡಳಿ ತೀರ್ಮಾನ ಕೈಗೊಂಡಿದೆ ಎಂದರು.

ವಕ್ಫ್ ಮಂಡಳಿ ಸದಸ್ಯ ಯಾಕೂಬ್ ವೈ. ಗುಲ್ವಾಡಿ, ಮಾಜಿ ಅಧ್ಯಕ್ಷರಾದ ನಕ್ವಾ ಯಾಹ್ಯಾ, ಕೆ.ಪಿ. ಇಬ್ರಾಹಿಂ, ಮಾಜಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ವಕ್ಫ್ ಆಡಿಟರ್ ನಾಝಿಯಾ ಸುದ್ದಿಗೋಷ್ಠಿಯಲ್ಲಿದ್ದರು.

ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವ ಪರಿಪಾಠ: ವಕ್ಫ್ ಬೋರ್ಡ್ ಅಧೀನದಲ್ಲಿರುವ ಎಲ್ಲ 1,990 ಮದರಸಾಗಳಲ್ಲಿಯೂ ರಾಷ್ಟ್ರಗೀತೆ ಹಾಡುವ ಪರಿಪಾಠವಿದೆ. ಆದರೆ ಸಾಮರಸ್ಯಕ್ಕೆ ಧಕ್ಕೆ ತರುವ ಉದ್ದೇಶ ಹೊಂದಿದವರು ಈ ಬಗ್ಗೆ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಅಧ್ಯಕ್ಷರು ಹೇಳಿದರು. ಶ್ರೀರಂಗಪಟ್ಟಣದ ಮಸೀದಿ ಅಧೀನದಲ್ಲಿ 45 ಎಕರೆ ವಕ್ಫ್ ಜಾಗವಿದೆ. ಟಿಪ್ಪು ಸುಲ್ತಾನ್ ಅನೇಕ ಮಠಗಳಿಗೆ ದಾನ ದತ್ತಿ ನೀಡಿದಂತೆ ಮೈಸೂರು ಮಹಾರಾಜರು ಬಾಬಾ ಬುಡನ್‌ಗಿರಿ ದರ್ಗಾ ಹಾಗೂ ಸುತ್ತಲಿನ ಜಾಗವನ್ನು ವಕ್ಫ್ ನೀಡಿದ್ದರು. ಇವೆಲ್ಲಾ ಸೌಹಾರ್ದಕ್ಕೆ ನಿದರ್ಶನಗಳು. ಇತಿಹಾಸದ ಕಳಂಕಗಳ ಬಗ್ಗೆ ಚರ್ಚೆ ಅನಗತ್ಯ. ಮನಸ್ಸು ಕೆಡಿಸಿಕೊಂಡು ಯಾರಿಗೂ ಪ್ರಯೋಜನವಿಲ್ಲ. ಆದರೆ ಸರ್ಕಾರಕ್ಕೆ ಧಮ್ಕಿ ಹಾಕಿ ಸಾಮರಸ್ಯ ಕೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಾಬಾ ಬುಡನ್‌ಗಿರಿಯಲ್ಲಿ ಹಿಂದು ಅರ್ಚಕರ ನೇಮಕ ಬಗ್ಗೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ವಾರದೊಳಗೆ ತೀರ್ಮಾನ ಕೈಗೊಳ್ಳಲಾಗುವುದು. ಉಡುಪಿ ಜಿಲ್ಲೆಯಲ್ಲಿ 139 ಮಸೀದಿಗಳು ಹಾಗೂ 612 ಸಂಸ್ಥೆಗಳು ವಕ್ಫ್ ಅಧೀನದಲ್ಲಿವೆ. ಕೊಡವೂರು ಕಲ್ಮತೆ ಮಸೀದಿ ವಿವಾದ ಬಗೆಹರಿಸುವಲ್ಲಿ ಸ್ಥಳೀಯ ಹಿಂದು, ಮುಸ್ಲಿಂ ಮುಖಂಡರು, ಶಾಸಕರೊಂದಿಗೆ ಚರ್ಚೆ ನಡೆಸಲಾಗಿದೆ.

- ಮೌಲಾನಾ ಎನ್.ಕೆ.ಮೊಹಮ್ಮದ್ ಶಫಿ

ವಕ್ಫ್ ಮಂಡಳಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net