

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಸಂವಿಧಾನ ರಕ್ಷಣೆಗಾಗಿ ಜ.30ರಂದು ನಗರದಲ್ಲಿ ಬೃಹತ್ ಮಾನವ ಸರಪಳಿ ಹಾಗೂ ಸೌಹಾರ್ದ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ನಾಗರಿಕರ ವೇದಿಕೆಯ ಸಂಚಾಲಕ ಆರ್.ಚಂದ್ರತೇಜಸ್ವಿ ಹೇಳಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ನಾಗರಿಕರ ವೇದಿಕೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರೈತ, ದಲಿತ, ಕಾರ್ಮಿಕ, ಹಾಗೂ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಮಾತನಾಡಿ, ಹುತಾತ್ಮ ದಿನವಾದ ಜನವರಿ 30 ರಂದು ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಹಾಗೂ ಹೋಬಳಿಮಟ್ಟದಲ್ಲಿ ಸೌಹಾರ್ದ ಕಾರ್ಯಕ್ರಮ ಹಮ್ಮಿಕೊಳ್ಳಲು ಕರೆ ನೀಡಲಾಗಿದೆ. ತಾಲೂಕಿನಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆಯಿಂದ ತಾಲೂಕಿನ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಹಲವು ಜೀವಪರ ಸಂಘಟನೆಗಳು ಸೇರಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ಕರ್ನಾಟಕ ಸೌಹಾರ್ದ ವೇದಿಕೆಯ ಸಂಚಾಲಕ ರಾಮಕೃಷ್ಣ ಮಾತನಾಡಿ, ಜಾತಿ- ಮತಧರ್ಮಗಳ ಹೆಸರಿನಲ್ಲಿ ಜನರನ್ನು ವಿಭಜಿಸುವ ಶಕ್ತಿಗಳಿಂದ ಸಾಮಾಜಿಕ ಸೌಹಾರ್ದತೆಗೆ ತೀವ್ರ ಹಾನಿಯಾಗಿದೆ. ದಿನ ನಿತ್ಯದ ದ್ವೇಷ ಭಾಷೆಯಿಂದ ಸಾಮಾಜಿಕ, ಮತೀಯ ದ್ವೇಷದ ಜತೆಗೆ ಅಸ್ಪೃಶ್ಯತೆ, ಜಾತೀಯ ದಮನ, ಮಹಿಳೆಯರ ಮೇಲಿನ ದೌರ್ಜನ್ಯ, ಆರ್ಥಿಕ ಅಸಮಾನತೆಗಳ ತೀವ್ರತೆಯೂ ಸೌಹಾರ್ದದ ವಾತಾವರಣ ಮತ್ತಷ್ಟು ಕಲುಷಿತಗೊಳಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡಪರ ಹೋರಾಟಗಾರ ಸಂಜೀವ ನಾಯಕ ಮಾತನಾಡಿ, ಸೌಹಾರ್ದತೆ ಎಂಬುದು ಎಲ್ಲರಲ್ಲೂ ಇದೆ. ಆದರೆ ಕೆಲವು ಸಮಾಜಘಾತುಕ ಶಕ್ತಿಗಳಿಂದ ಸೌಹಾರ್ದತೆಯು ಹಾಳಾಗುತ್ತಿದೆ ಎಂದರು.
ಉಪನ್ಯಾಸಕ ಡಾ.ಪ್ರಕಾಶ್ ಮಂಟೇದ ಮಾತನಾಡಿ, ಜನರಲ್ಲಿ ಹರಡಿರುವ ಮೌಢ್ಯ ಮತ್ತು ಕಂದಾಚಾರ ದ್ವೇಷ ಭಾವನೆಗಳನ್ನು ಹೋಗಲಾಡಿಸಿ ಸಮಾನತೆಯ ತತ್ವವನ್ನು ಸಾರಬೇಕಾಗಿದೆ ಎಂದರು.