

ಬೇಲೂರು : ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಕರೆಯಲಾಗಿದ್ದ 2024-25ನೇ ಸಾಲಿನ ಅಯವ್ಯಯ ಬಜೆಟ್ ಪೂರ್ವಭಾವಿ ಸಭೆಗೆ ಬೆರಳೆಣಿಕೆಯಷ್ಟು ಸಾರ್ವಜನಿಕರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿ ಸಲಹೆ, ಸೂಚನೆಗಳನ್ನು ನೀಡಿದರು.
ಕರವೇ(ಪ್ರವೀಣ್‌ಶೆಟ್ಟಿ)ಬಣದ ತಾಲೂಕು ಅಧ್ಯಕ್ಷ ಭೋಜೇಗೌಡ ಮಾತನಾಡಿ, ಪುರಸಭೆಗೆ ಸೇರಿದ 134 ಮಳಿಗೆಗಳನ್ನು ಈ ಪ್ರಕ್ಯೂರ್‌ಮೆಂಟ್‌ನಲ್ಲಿ ಹರಾಜು ಕೂಗಿದವರಿಗೆ ಮಳಿಗೆ ಕೊಡಬೇಕು. ದೇವಸ್ಥಾನಕ್ಕೆ ಹೋಗುವ ರಸ್ತೆಯ ಕೆಂಪೇಗೌಡ ವೃತ್ತದಲ್ಲಿ ಸ್ವಾಗತ ಕಮಾನು ನಿರ್ಮಿಸಿ ವಿದ್ಯುತ್‌ದೀಪಗಳಿಂದ ಸಿಂಗರಿಸಿದರೆ ಅಂದವಾಗಿ ಕಾಣುತ್ತದೆ. ಅಧ್ಯಕ್ಷರು ಈ ಬಗ್ಗೆ ಗಮನಹರಿಸಬೇಕು ಎಂದರು. ಸಾಮಾಜಿಕ ಕಾರ್ಯಕರ್ತ ನೂರ್‌ಅಹಮದ್ ಮಾತನಾಡಿ, ರಸ್ತೆ ಬದಿ ವ್ಯಾಪಾರಿಗಳಿಗೆ ತೊಂದರೆ ಕೊಡುವ ಪುರಸಭೆಯವರು, ದೇವಸ್ಥಾನದ ಅಕ್ಕಪಕ್ಕದಲ್ಲಿ ದೊಡ್ಡ ಕಟ್ಟಡ ನಿರ್ಮಿಸುತ್ತಿದ್ದರೂ ಸುಮ್ಮನಿದ್ದಾರೆ. ಇದು ಯಾವ ನ್ಯಾಯ ಎಂದರು. ಬಳಕೆದಾರರ ವೇದಿಕೆ ಕಾರ್ಯದರ್ಶಿ ಸುಲೇಮಾನ್ ಮಾತನಾಡಿ, ಮುಖ್ಯರಸ್ತೆ ವಿಸ್ತರಣೆಗಾಗಿ ಒತ್ತಾಯಿಸಿದರೂ ಕ್ರಮ ಕೈಗೊಂಡಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೊಸ ನಗರದಲ್ಲಿನ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿ, ಒಳ ಚರಂಡಿ ಕಲ್ಪಿಸಲು ಬಜೆಟ್‌ನಲ್ಲಿ ಸೇರಿಸಿ, ಸೇತುವೆ ಉಳಿಸಲು ಮುಂದಾಗಿ ಎಂದರು. ಬಜೆಟ್ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಪುರಸಭೆಗೆ ಬರುವ ಅನುದಾನ ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿಸಬೇಕಿದೆ. ಪಟ್ಟಣದ ಜನರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಹೊಳೆ ಬೀದಿಯಲ್ಲಿ(ಎಸ್‌ಟಿಪಿ) ಭಸ್ಮೀಕರಣ ಹೊಂಡದ ಕಾಮಗಾರಿ ಮುಗಿದಿದ್ದು, ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಉದ್ಘಾಟಿಸಲಾಗುವುದು. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಒಳ ಚರಂಡಿ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಡಿಪಿಆರ್ ಆಗಿದೆ ಮತ್ತು ಸಭೆಯಲ್ಲಿ ಸಾರ್ವಜನಿಕರು ನೀಡಿರುವ ಎಲ್ಲ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡು ಸಾಧ್ಯವಾದಷ್ಟು ಬಜೆಟ್‌ನಲ್ಲಿ ಸೇರಿಸಿ ಕೆಲಸ ಮಾಡಿಸಲು ಮುಂದಾಗಲಿದ್ದೇವೆ ಎಂದರು.
ಪುರಸಭೆ ಉಪಾಧ್ಯಕ್ಷೆ ದಿವ್ಯ ಗಿರೀಶ್, ಸದಸ್ಯರಾದ ಜಮಾಲುದ್ದೀನ್, ಬಿ.ಗಿರಿಶ್, ಫಯಾಜ್, ಜಗದೀಶ್, ಉಷಾ, ಮಣಿ, ಜಮೀಲಾ ತೌಫಿಕ್, ರತ್ನಕ್ಕ, ಮುಖ್ಯಾಧಿಕಾರಿ ಸುಜಯ್ ಕುಮಾರ್ ಸೇರಿದಂತೆ ಇತರರಿದ್ದರು.