

ಕೊಳ್ಳೇಗಾಲ: ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಂಜುಳಾ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.ಸರ್ಕಾರಿ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ ಆಯೋಜಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ನಾಗರಾಜು ಮಾತನಾಡಿ, ರಾಜ್ಯೋತ್ಸವ ಅಂಗವಾಗಿ ಮೆರವಣಿಗೆ ಕಾರ್ಯಕ್ರಮ ಆಯೋಜನೆ ಮಾಡುವಂತೆ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಮುಂದಿನ ವರ್ಷದಿಂದ ಮೆರವಣಿಗೆ ಮಾಡೋಣ ಎಂದರು. ಬಿಇಒ ಮಂಜುಳಾ ಮಾತನಾಡಿ, ರಾಜ್ಯೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲಾ ಮಕ್ಕಳು ನೆರವೇರಿಸಿಕೊಡಲಿದ್ದಾರೆ ಎಂದು ತಿಳಿಸಿದರು. ನ. 1ರ ಬೆಳಗ್ಗೆ ರಾಷ್ಟ್ರ ಹಾಗು ನಾಡ ಧ್ವಜಾರೋಹಣ, ಧ್ವಜ ವಂದನೆ ನಂತರ ವೇದಿಕೆ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆಯಲ್ಲಿ ಶೇ. 100 ಅಂಕ ಗಳಿಸಿದ ಹತ್ತು ಮಕ್ಕಳಿಗೆ ಗೌರವ ಸಮರ್ಪಣೆ ಹಾಗೂ ಪ್ರಶಸ್ತಿ ಪತ್ರ ನೀಡುವ ಬಗ್ಗೆ ಚರ್ಚೆಯಾಯಿತು.
ತಹಸೀಲ್ದಾರ್ ಮಂಜುಳಾ ಮಾತನಾಡಿ, ಈ ಬಾರಿ 50ನೇ ವರ್ಷದ (ಸುವರ್ಣ) ರಾಜ್ಯೋತ್ಸವ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಸರ್ಕಾರ ಆಯ್ಕೆ ಮಾಡಿರುವ 5 ಗೀತೆಗಳನ್ನು ಕಾರ್ಯಕ್ರದಲ್ಲಿ ಹಾಡಲಾಗುತ್ತದೆ. ರಾಜ್ಯೋತ್ಸವವನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿಸಲು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳೂ ಸಹಕಾರ ನೀಡಬೇಕು. ಶಾಸಕ ಎ.ಆರ್. ಕೃಷ್ಣಮೂರ್ತಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್, ಅಬಕಾರಿ ನಿರೀಕ್ಷಕ ಸುನೀಲ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಕಬಿನಿ ಪ್ರಭಾರ ಇಇ ರಮೇಶ್, ಇಂಜಿನಿಯರ್ ರಾಮಕೃಷ್ಣ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸುರೇಂದ್ರ ಇತರರು ಇದ್ದರು.