ಶೀಘ್ರದಲ್ಲಿ ರೈತರಿಗೆ ಸಾಗುವಳಿ ಪತ್ರ ವಿತರಣೆ

HUN-SEP-9-3(DARAKHASTU SMITI SABHE)
Published on

ಹುಣಸೂರು: ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ದರಖಾಸ್ತು ಸಮಿತಿ ಸಭೆಯಲ್ಲಿ ಸಲ್ಲಿಕೆಯಾದ 20 ಅರ್ಜಿಗಳನ್ನು ಅಂಗೀಕರಿಸಲಾಯಿತು.

ಸಮಿತಿ ಅಧ್ಯಕ್ಷ ಹಾಗೂ ಶಾಸಕ ಜಿ.ಡಿ.ಹರೀಶ್‌ಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಅರ್ಜಿಗಳನ್ನು ಅಂಗೀಕರಿಸಿದ ನಂತರ ಮಾತನಾಡಿದ ಶಾಸಕರು, ಕಳೆದ ಒಂದೂವರೆ ವರ್ಷಗಳಲ್ಲಿ ಸಮಿತಿಯ ಮುಂದೆ ಬಂದಿರುವ 130ಕ್ಕೂ ಹೆಚ್ಚು ಅರ್ಜಿಗಳ ಪರಿಶೀಲನೆ ವಿವಿಧ ಹಂತದಲ್ಲಿದೆ. ಎಲ್ಲ ಅರ್ಜಿಗಳನ್ನು ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡುವ ವ್ಯವಸ್ಥೆ ಜಾರಿಯಲ್ಲಿದ್ದು, ಅತ್ಯಂತ ಪಾರದರ್ಶಕವಾಗಿ ಉಪಕ್ರಮಗಳು ನಡೆದಿವೆ ಎಂದರು.

ರೈತರು ಅರ್ಜಿಯನ್ನು ಸಲ್ಲಿಸಿದ ನಂತರ ಪ್ರತಿಹಂತದ ಮಾಹಿತಿ ಸಭೆಯಲ್ಲಿ ನೀಡಲಾಗುತ್ತಿದ್ದು, 59ನೇ ನೋಟಿಸ್, ಸರ್ವೇ ಕಾರ್ಯ, ಅಳತೆ, ದುರಸ್ತಿ, ಆರ್‌ಟಿಸಿಯಲ್ಲಿ ನಂಬರ್ ನಮೂದಿಸುವ ಮುಂತಾದ ಕಾರ್ಯಗಳು ಸಮರ್ಪಕವಾಗಿ ಆಗುತ್ತಿದ್ದು, ಶೀಘ್ರದಲ್ಲಿ ರೈತರಿಗೆ ಸಾಗುವಳಿ ಪತ್ರ ವಿತರಿಸಲಾಗುವುದು. ಹತ್ತಾರು ವರ್ಷಗಳಿಂದ ಸಾಗುವಳಿ ಪತ್ರಕ್ಕಾಗಿ ಅಲೆದಾಡುತ್ತಿರುವ ರೈತರಿಗೆ ಸಮಾಧಾನ ಸಿಗಲಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಜೆ.ಮಂಜುನಾಥ್, ಸಮಿತಿ ಸದಸ್ಯರಾದ ಕುಮಾರ್, ಗುಣಶೇಖರ್, ಲತಾ, ಕಂದಾಯ ಇಲಾಖೆ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net