

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರದ ಹಲವು ಭಾಗಗಳಲ್ಲಿ ಕೆಲವು ಕಾರ್ಖಾನೆಗಳು ಕಲುಷಿತ ಕೆಮಿಕಲ್ ತ್ಯಾಜ್ಯ ಹಾಗೂ ಇನ್ನಿತರ ತ್ಯಾಜ್ಯವನ್ನು ಕೆರೆಗಳಿಗೆ, ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಅಂತರ್ಜಲ, ಮಣ್ಣು, ಗಾಳಿ ಕಲುಷಿತಗೊಳ್ಳುತ್ತಿದೆ. ಇದು ಮುಂದಿನ ದಿನಗಳಲ್ಲಿ ಮರುಕಳಿಸಿದರೆ ತ್ಯಾಜ್ಯ ಸುರಿಯುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಎಚ್ಚರಿಕೆ ನೀಡಿದರು.
ದೇವನಹಳ್ಳಿ ತಾಲೂಕು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ಎನ್‌ಜಿಟಿ ಆದೇಶ ಪಾಲನೆ, ಅಪೇರಲ್ ಪಾರ್ಕ್‌ಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಮಂಗಳವಾರ ಕರೆಯಲಾಗಿದ್ದ ಜಂಟಿ ಸಭೆಯಲ್ಲಿ ಮಾತನಾಡಿದರು. ದೊಡ್ಡಬಳ್ಳಾಪುರದ ಕೆರೆಗಳಿಗೆ ತ್ಯಾಜ್ಯ ನೀರು ಬಿಡುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದ ಅವರು, ಕಾರ್ಖಾನೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಇದ್ದಲ್ಲಿ ಯಾವುದೇ ತ್ಯಾಜ್ಯ ಹೊರಗಡೆ ಬಿಡುವ ಅವಶ್ಯಕತೆ ಇಲ್ಲ. ಹಲವು ಕಾರ್ಖಾನೆಗಳು ಇದನ್ನು ಪಾಲನೆ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ಅಪೇರಲ್ ಪಾರ್ಕ್‌ನಲ್ಲಿ ಸುಮಾರು3 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಶೌಚಗೃಹದ ಕೊಳಚೆ ನೀರು ನೇರವಾಗಿ ಕೆರೆಗಳಿಗೆ, ಕಾಲುವೆಗಳಿಗೆ ಸೇರುತ್ತಿವೆ. ಕಾರ್ಖಾನೆಗಳಲ್ಲಿ ಸರಿಯಾಗಿ ಘನತ್ಯಾಜ್ಯ ನಿರ್ವಹಣೆ ಆಗುತ್ತಿಲ್ಲ ಎಂದು ದೂರಿದರು.
ಒಳಚರಂಡಿ ವ್ಯವಸ್ಥೆ ಆಗಬೇಕಿದೆ: ಗಾರ್ಮೆಂಟ್ಸ್ ಹಾಗೂ ಸಿದ್ದ ಉಡುಪು ತಯಾರಿಕಾ ಘಟಕಗಳಲ್ಲಿ ಕೆಮಿಕಲ್ ಮಿಶ್ರಿತ ಬಣ್ಣದ ನೀರು ಬಳಸಿ ಬಟ್ಟೆ ಸಿದ್ದ ಪಡಿಸುವವರು. ಬಟ್ಟೆ ಸಿದ್ಧವಾದ ನಂತರ ತ್ಯಾಜ್ಯ ನೀರನ್ನು ಹೊರಗೆ ಬಿಡುತ್ತಿದ್ದಾರೆ. ಆ ತ್ಯಾಜ್ಯ ನೀರನ್ನು ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡಬೇಕು. ಇದರ ಜತೆಗೆ ಒಳಚರಂಡಿ ವ್ಯವಸ್ಥೆ ಆಗಬೇಕಿದೆ ಎಂದು ಶಾಸಕ ಧೀರಜ್ ಸೂಚಿಸಿದರು.
ಕೈಗಾರಿಕೆಗಳಲ್ಲೇ ವಿಲೇವಾರಿಯಾಗಬೇಕು: ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮಾತನಾಡಿ ಕೈಗಾರಿಕೆಗಳಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ಅಲ್ಲಿಯೇ ವಿಲೇವಾರಿ ಮಾಡಿಕೊಳ್ಳಬೇಕು ಯಾವುದೇ ಕಾರಣಕ್ಕೂ ಆ ನೀರು ಹೊರಗೆ ಬರಬಾರದು ಇದರಲ್ಲಿ ಲೋಪ ಕಂಡುಬಂದರೆ ಶಿಸ್ತು ಕ್ರಮಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾರ್ಖಾನೆಗಳ ತ್ಯಾಜ್ಯದಿಂದ ದೊಡ್ಡಬಳ್ಳಾಪುರದ ನಾಗರಕೆರೆ, ಚಿಕ್ಕ ತುಮಕೂರು ಕೆರೆ, ದೊಡ್ಡ ತುಮಕೂರು, ಮಜರಾ ಹೊಸಹಳ್ಳಿ ಕೆರೆಗಳು ಕಲುಷಿತಗೊಂಡು ಸುತ್ತಮುತ್ತಲಿನ ಹಳ್ಳಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಕುಡಿಯುವ ನೀರು ಯೋಗ್ಯವಲ್ಲದ ಪರಿಸ್ಥಿತಿ ಇದೆ. ಕೊಳವೆ ಬಾವಿಗಳಲ್ಲಿ ನೀರು ಕಲುಷಿತಗೊಂಡಿದೆ ಎಂದು ಸುತ್ತಮುತ್ತಲಿನ ರೈತರು, ಪ್ರಗತಿಪರ ಚಿಂತಕರು ಅನೇಕ ಬಾರಿ ತಿಳಿಸಿದ್ದಾರೆ. ಈ ರೀತಿ ವಾತಾವರಣ ಬೇರೆ ಕೆರೆಗಳಿಗೂ ಆಗಬಾರದು. ಶಾಶ್ವತವಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು. ಕೊಳಚೆ ನೀರು ಸಂಸ್ಕರಣಾ ಘಟಕ, ಘನತ್ಯಾಜ್ಯ ನಿರ್ವಹಣೆ, ಸಾಮಾನ್ಯ ಸಂಸ್ಕರಣಾ ಘಟಕ, ಪರಿಸರ ಸ್ಥಾವರಗಳನ್ನು ಅಳವಡಿಸಿಕೊಳ್ಳದ ಕಾರ್ಖಾನೆಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ಕೈಗಾರಿಕೆಗಳಿಂದ ತಪ್ಪಾಗಬಾರದು: ಕೈಗಾರಿಕೆಗಳು ಸಾಕಷ್ಟು ಉದ್ಯೋಗ ನೀಡಿ ಹಲವರಿಗೆ ಜೀವನೋಪಾಯ ಕಲ್ಪಿಸಿದೆ. ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್)ಯ ಮೂಲಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿವೆ. ಹಾಗಾಗಿ ಕೈಗಾರಿಕೆಗಳಿಂದ ಯಾವುದೇ ತಪ್ಪಾಗಬಾರದು ಎಂದು ಡಿಸಿ ಮನವಿ ಮಾಡಿದರು. ಕಾರ್ಖಾನೆಗಳಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ಅನಧಿಕೃತವಾಗಿ, ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಸುರಿದರೆ ಅಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.