ಅನ್ನಭಾಗ್ಯದಿಂದ ಬಡವರು ವಂಚಿತರಾಗದಿರಲಿ

28blrp3
ಬೇಲೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಪಡಿತರ ಚೀಟಿ ಕೊಡಿಸುವಂತೆ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್ ಅವರಿಗೆ ಕಲ್ಲೇಶ್ ದಂಪತಿ ಮನವಿ ಮಾಡಿದರು.
Published on

ಬೇಲೂರು: ಅನ್ನಭಾಗ್ಯದಿಂದ ಯಾವುದೇ ಬಡವರು ವಂಚಿತರಾಗಬಾರದು ಹಾಗೂ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಿಂದ ಸಾಕಷ್ಟು ಅರ್ಹರು ಹೊರಗಿರುವ ಬಗ್ಗೆ ಮಾಹಿತಿ ಇದ್ದು, ಎಲ್ಲರಿಗೂ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈಗ ಪಡಿತರ ಚೀಟಿಗೆ ಹೆಸರು ನೋಂದಾಯಿಸಲಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎಂಬ ಆರೋಪವಿದ್ದು, ಅಂತವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಮುಂದಿನ ಒಂದು ವಾರದಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಭೆ ಕರೆಯಬೇಕು. ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಮಾಹಿತಿಯ ನಾಮಫಲಕ ಅಳವಡಿಸಬೇಕು. ಆಹಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಗ್ರಾಹಕರ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಸೂಚಿಸಿದರು.

ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯ ಜನರಲ್ಲಿ ಯೋಜನೆಯ ಬಗ್ಗೆ ಜಾಗೃತಿ ಸಮಿತಿ ರಚಿಸಬೇಕು. ತಾಲೂಕಿನಲ್ಲಿ ಯಾರಿಗಾದರೂ ಅನ್ಯಾಯವಾದರೆ ನೇರವಾಗಿ ತಾಪಂ ಇಒ ಅಥವಾ ನನಗೆ ದೂರು ನೀಡಬಹುದು. ಗೃಹಲಕ್ಷ್ಮಿ ಯೋಜನೆಯಲ್ಲಿ ಅಧಿಕಾರಿಗಳ ಪಾತ್ರ ಹೆಚ್ಚಿದೆ. ಯಾವುದೇ ಫಲಾನುಭವಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಶಕ್ತಿ ಯೋಜನೆ, ಯುವನಿಧಿ, ವಿದ್ಯುತ್ ಯೋಜನೆಗಳಿಂದ ಫಲಾನುಭವಿಗಳು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.

ಸಮಿತಿ ಸದಸ್ಯ ಇಂದ್ರೇಶ್ ಮಾತನಾಡಿ, ಆಹಾರ ಇಲಾಖೆ ಅಧಿಕಾರಿಗಳು ಇಲ್ಲಿವರೆಗೂ ಎಷ್ಟು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನಿಡಿದ್ದೀರಾ. ಎಷ್ಟು ಸಮಸ್ಯೆ ಬಗೆಹರಿಸಿದ್ದೀರಾ ಎಂಬುದರ ಸಂಪೂರ್ಣ ಮಾಹಿತಿ ನೀಡಬೇಕು. ತಾಲೂಕಿನಲ್ಲಿರುವ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ. ಅವರು ಹೇಳಿದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಾರೆ. ಕೆಲ ಅಂಗಡಿಗಳಲ್ಲಿ ಜನರಿಂದ ಹಣ ಪಡೆಯುತ್ತಿರುವ ಬಗ್ಗೆ ಆರೋಪ ಇದೆ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು ಸಕಾರದ ಯೋಜನೆಯನ್ನು ಸಕಾರಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಆಹಾರ ಇಲಾಖೆ ನಿರೀಕ್ಷಕಿ ವೀಣಾ ಮಾತನಾಡಿ, ಗ್ಯಾರಂಟಿ ಯೋಜನೆಯಲ್ಲಿ ಆಹಾರ ಇಲಾಖೆ ಪಾತ್ರ ಮಹತ್ತರದ್ದಾಗಿದೆ. ನಾವು ನ್ಯಾಯಬೆಲೆ ಅಂಗಡಿಗಳಿಗೆ ಹೋದ ಸಂದರ್ಭದಲ್ಲಿ ಯಾರೂ ಅಂಗಡಿಯವರ ವಿರುದ್ಧ ಆರೋಪ ಮಾಡುವುದಿಲ್ಲ. ಆದರೆ ಅಂಗಡಿಯವರು ಗ್ರಾಹಕರಿಗೆನಾದರೂ ಮೋಸ ಮಾಡುತ್ತಿರುವ ಬಗ್ಗೆ ದೂರು ಬಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಡಿತರ ಚೀಟಿಗಾಗಿ ಮನವಿ: 2019ರಲ್ಲಿ ನಮ್ಮ ಪಡಿತರ ಚೀಟಿ ರದ್ದಾಗಿದೆ. ಅಂದಿನಿಂದ ಕಾರ್ಡ್‌ಗಾಗಿ ಹೋರಾಟ ಮಾಡುತಿದ್ದೇನೆ. ಆದರೆ ಇಲ್ಲಿವರೆಗೂ ಸಿಕ್ಕಿಲ್ಲ. ಇದರಿಂದಾಗಿ ಸರ್ಕಾರದ ಯೋಜನೆಯ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ನಮಗೆ ಪಡಿತರ ಚೀಟಿ ಕೊಡಿಸಬೇಕೆಂದು ಸವಾಸಿಹಳ್ಳಿ ಗ್ರಾಮದ ಕಲ್ಲೇಶ್ ಹಾಗೂ ರೇಖಾ ಅಧ್ಯಕ್ಷರಲ್ಲಿ ಮನವಿ ಮಾಡಿದರು.

ತಾಪಂ ಇಒ ವಸಂತ ಕುಮಾರ್, ಸಮಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net