ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಶಿಫಾರಸು

govind
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿನ ಶಿಕ್ಷಣ, ಆರೋಗ್ಯ, ತಲಾದಾಯ, ಕೃಷಿ, ಹೈನಗಾರಿಕೆ, ಕೈಗಾರಿಕೆ, ಸೇವಾ ವಿಭಾಗ, ಸಾಮಾಜಿಕ ವಲಯಗಳ ಮಾನದಂಡಗಳ ಆಧಾರದ ಮೇಲೆ ಅಭಿವೃದ್ಧಿ ಸೂಚ್ಯಂಕವನ್ನು ನಿರ್ಧರಿಸಲಾಗುತ್ತದೆ. ಈ ಅಭಿವೃದ್ಧಿ ಸೂಚ್ಯಂಕವನ್ನು ಆಧರಿಸಿ ಹಿಂದುಳಿದ ತಾಲೂಕುಗಳು ಯಾವುವು ಎಂಬುದನ್ನು ಗುರುತಿಸಿ ಆ ತಾಲೂಕುಗಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾಗುವ ಆರ್ಥಿಕ ಸೌಲಭ್ಯವನ್ನು ಒದಗಿಸಲು ಸರ್ಕಾರಕ್ಕೆ ಸಮಿತಿ ವತಿಯಿಂದ ಶಿಫಾರಸ್ಸು ಮಾಡಲಾಗುವುದು ಎಂದು ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್ ತಿಳಿಸಿದರು.

ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದ ಸಭೆಯಲ್ಲಿ ಮಾತನಾಡಿದರು. ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ರಾಜ್ಯದ 240 ತಾಲೂಕುಗಳ ಅಧ್ಯಯನ ನಡೆಸುತ್ತದೆ. ಕಲಬುರ್ಗಿ, ಬೆಳಗಾವಿ, ಮೈಸೂರು, ಬೆಂಗಳೂರು ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. 240 ತಾಲೂಕುಗಳಲ್ಲಿ ಅತ್ಯಂತ ಹಿಂದುಳಿದ ತಾಲೂಕುಗಳು ಮತ್ತು ಅತೀ ಹಿಂದುಳಿದ ಹಾಗೂ ಹಿಂದುಳಿದ ತಾಲೂಕುಗಳು,ಮುಂದುವರಿದ ತಾಲೂಕುಗಳು, ಅತೀ ಮುಂದುವರಿದ ತಾಲೂಕುಗಳು ಎಂದು ವಿಂಗಡಿಸಿ ಯಾವ ಕಾರಣಕ್ಕೆ ತಾಲೂಕು ಹಿಂದುಳಿದಿದೆ ಎಂದು ತಿಳಿಯಲು, ಮುಂದುವರೆದಿರುವ ತಾಲೂಕುಗಳಿಂದ ಹಿಂದುಳಿದ ತಾಲೂಕುಗಳನ್ನು ಹೇಗೆ ಸುಧಾರಣೆ ಮಾಡಬೇಕು ಎಂಬ ಮಾಹಿತಿಯನ್ನು ಪ್ರತಿ ತಾಲೂಕುವಾರು ಪಡೆಯಲಾಗುವುದು ಎಂದು ತಿಳಿಸಿದರು.

32610.24 ಕೋಟಿ ರೂ.ಖರ್ಚಾಗಿದೆ: 2002ರಲ್ಲಿ ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ 175 ತಾಲೂಕುಗಳ ಅಧ್ಯಯನ ನಡೆಸಿದ್ದರು. ಅದರಲ್ಲಿ 114 ತಾಲೂಕುಗಳ ಪೈಕಿ 39 ಅತೀ ಹಿಂದುಳಿದ, 40 ಅತ್ಯಂತ ಹಿಂದುಳಿದ, 35 ಹಿಂದುಳಿದ ತಾಲೂಕುಗಳು ಎಂದು ಗುರುತಿಸಲಾಗಿತ್ತು. ರಾಜ್ಯದ ಹಿಂದುಳಿದ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 2007 ರಿಂದ 2023 ವರೆಗೆ 43456.96 ಕೋಟಿ ಶಿಫಾರಸ್ಸುಮಾಡಲಾಗಿತ್ತು. ಅದರಲ್ಲಿ 35380.25 ಕೋಟಿ ರೂ.ಬಿಡುಗಡೆ ಆಗಿ 32610.24 ಕೋಟಿ ರೂ.ಖರ್ಚಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಅ. 2025 ಕ್ಕೆ ವರದಿ: ರಾಜ್ಯ ಸರ್ಕಾರ 2024ರಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರ್ಥಿಕ ತಜ್ಞರನ್ನೊಳಗೊಂಡ ಸಮಿತಿ ರಚಿಸಿದ್ದು, ಈ ಸಮಿತಿಯು ಕೃಷಿ, ಕೈಗಾರಿಕೆ, ಆರ್ಥಿಕ ಮೂಲಸೌಲಭ್ಯ, ಸಾಮಾಜಿಕ ಸೌಲಭ್ಯ, ಹಣಕಾಸಿನ ಮತ್ತು ತಾಂತ್ರಿಕ ಮೂಲಸೌಕರ್ಯ ಮುಂತಾದ ವಲಯಗಳ ಅಭಿವೃದ್ಧಿಯನ್ನು ಗುರುತಿಸಿ, ಸೂಚ್ಯಂಕ ನಿಗದಿಪಡಿಸಲಿದೆ. ಸಮಿತಿಯು ಅ. 2025 ಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ ಎಂದು ಪ್ರೋ.ಗೋವಿಂದರಾವ್ ಹೇಳಿದರು. ದೇವನಹಳ್ಳಿ 77.89, ದೊಡ್ಡಬಳ್ಳಾಪುರ 85.99, ಹೊಸಕೋಟೆ 91.96, ನೆಲಮಂಗಲ 131.54 ಒಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲೆ 95.60 ತಲಾದಾಯವಿದೆ ಎಂಬ ತಲಾದಾಯದ ಅಂಕಿಅಂಶಗಳನ್ನು ಪ್ರಕಟಿಸಿದರು.

ದೇವನಹಳ್ಳಿ, ದೊಡ್ಡಬಳ್ಳಾಪುರ ಹಿಂದುಳಿದ ತಾಲೂಕು: ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳು ರಾಜ್ಯದ ಸರಾಸರಿ ತಲಾದಾಯದಲ್ಲಿ ಹಿಂದುಳಿದ ತಾಲೂಕುಗಳಾಗಿವೆ. ಶಿಕ್ಷಣ ಹಾಗೂ ಆರೋಗ್ಯ ಸೂಚ್ಯಂಕದಲ್ಲಿ ಕ್ರಮವಾಗಿ ಅತ್ಯಂತ ಹಿಂದುಳಿದ, ಹಿಂದುಳಿದ ಜಿಲ್ಲೆಯಾಗಿದೆ ಎಂದರು. ಜಿಲ್ಲೆಗೆ ಸಂಬಂಧಿಸಿದಂತೆ ಶಿಕ್ಷಣ, ಆರೋಗ್ಯ, ಕೈಗಾರಿಕೆ, ಕೃಷಿ, ಮೂಲಸೌಕರ್ಯ, ತಂತ್ರಜ್ಞಾನ, ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ವಿಷಯಾಧಾರಿತ ಚರ್ಚೆ ನಡೆಸಿದ ಸಮಿತಿಯು ಅಧಿಕಾರಿಗಳಿಂದ, ಜಿಲ್ಲೆಯ ಸಂಘ ಸಂಸ್ಥೆಗಳ ಮುಖಂಡರಿಂದ ಮಾಹಿತಿ ಪಡೆದುಕೊಂಡರು. ಸಮಿತಿ ಗುರುತಿಸಿರುವ ವಿಷಯಗಳಲ್ಲದೇ ಜಿಲ್ಲೆಗೆ ಸಂಬಂಧಿಸಿದಂತೆ ಇನ್ನೂ ಅನೇಕ ವಿಷಯಗಳನ್ನು ಗಮನಿಸಲಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಮೂಲಸೌಕರ್ಯಕ್ಕೆ ಮನವಿ: ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದರೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ ಎಂದರು. ಕುಡಿಯುವ ನೀರು ಪೂರೈಕೆ, ರೈಲ್ವೇ ಸೌಕರ್ಯ, ತ್ಯಾಜ್ಯ ನಿರ್ವಹಣೆ ಘಟಕಗಳು, ನೀರು ಶುದ್ಧೀಕರಣ ಘಟಕಗಳು ಸ್ಥಾಪನೆ ಆಗಬೇಕಿದೆ. ಮೆಡಿಕಲ್ ಕಾಲೇಜು ಆಗಬೇಕು, ಜಿಲ್ಲಾ ಆಸ್ಪತ್ರೆಗೆ ಅನುದಾನದ ಅವಶ್ಯಕತೆ ಇದ್ದು ಜಿಲ್ಲೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಪತ್ರದ ಮುಖೇನ ನೀಡಲಾಗುವುದು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ ಸರ್ಕಾರಕ್ಕೆ ಶಿಫಾರಸು ಮಾಡಲು ಸಮಿತಿಯಲ್ಲಿ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net