

ತುಮಕೂರು: ಜಿಲ್ಲೆಯಲ್ಲಿ ಅಂಕೆ ಮೀರಿರುವ ಕರೊನಾ ನಿಯಂತ್ರಣಕ್ಕೆ ಹರಸಾಹಸಪಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸರಣಿ ಸಭೆ ಸೋಮವಾರ ಕೂಡ ಮುಂದುವರಿಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ತರುವ ಪ್ರಯತ್ನ ಮುಂದುವರಿದಿದ್ದು, ಕೆಂಪುವಲಯದಲ್ಲಿದ್ದ ಜಿಲ್ಲೆ ಕಿತ್ತಳೆ ವಲಯಕ್ಕೆ ಬಂದಿದೆ ಎಂದರು. ಜಿಲ್ಲೆಯಲ್ಲಿ 27000 ಇದ್ದ ಸಕ್ರಿಯ ಸೋಂಕಿತರ ಸಂಖ್ಯೆ ಪ್ರಸ್ತುತ 17 ಸಾವಿರಕ್ಕಿಳಿದಿದೆ, ಮಹಾಮಾರಿಯ ಅಬ್ಬರ ತುಸು ಕಡಿಮೆಯಾಗಿದ್ದು, ಮೇ 15ರಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮೇ 15 ರಂದು ಶೇ.42.29ರಷ್ಟಿದ್ದ ಸೋಂಕಿತರ ಸಂಖ್ಯೆ ಮೇ 23ರಂದು 31.66ಕ್ಕೆ ಇಳಿದಿದೆ ಎಂದು ಸಮಾಧಾನಪಟ್ಟುಕೊಂಡರು.
ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಿಸುವುದು ನಮ್ಮ ಮುಂದಿರುವ ಸವಾಲು, ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸುವ ನಿರ್ಧಾರಕ್ಕೆ ಎಲ್ಲರೂ ಸಹಕಾರ ನೀಡಬೇಕು. ಈವರೆಗೆ ಜಿಲ್ಲೆಯಲ್ಲಿ 17 ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 82 ಆಮ್ಲಜನಕ ಸೌಲಭ್ಯದ ಹಾಸಿಗೆ ಇದೆ, ಕ್ವಾರಿ ಮತ್ತು ಕೈಗಾರಿಕೋದ್ಯಮಿಗಳು 256 ಕಾನ್ಸನ್‌ಟ್ರೇಟರ್‌ಗಳನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ತಾಲೂಕು ಮಟ್ಟದಲ್ಲಿಯೇ ಆಮ್ಲಜನಕ ಪೂರೈಸುವ ವ್ಯವಸ್ಥೆ ವಾಡಲಾಗಿದೆ. ಜಿಲ್ಲೆಯಲ್ಲಿ ರೆಮ್‌ಡೆಸಿವಿರ್ ಕೊರತೆಯಿಲ್ಲ. ಲಸಿಕೀಕರಣಕ್ಕೂ ಸಮಸ್ಯೆ ಇಲ್ಲ, ನಗರದಲ್ಲಿ ಪ್ರತಿದಿನ ಒಂದು ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ, ಗ್ರಾಮೀಣ ಭಾಗದಲ್ಲಿಯೂ ಲಸಿಕೆ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದರು.
ಕೋವಿಡ್ ಕೇರ್ ಸೇಂಟರ್‌ಗಳ ನಿರ್ವಹಣೆಗೆ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಸ್ವಚ್ಛತೆ, ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಕ್ರಮವಹಿಸಲು ಸೂಚಿಸಲಾಗಿದೆ. 500 ಹಳ್ಳಿಗಳಲ್ಲಿ ಕೋವಿಡ್ ಪ್ರಕರಣ ಕಂಡು ಬಂದಿದೆ. ನಗರದಿಂದ ಗ್ರಾಮಕ್ಕೆ ತೆರಳುವವರ ಮೇಲೆಯೂ ನಿಗಾ ಇಡಲಾಗಿದೆ ಎಂದರು.
ತುಮಕೂರು, ಶಿರಾ, ತಿಪಟೂರು, ಮಧುಗಿರಿ ಹಾಗೂ ಪಾವಗಡದಲ್ಲಿ ಆಕ್ಸಿಜನ್ ಉತ್ಪಾದನಾ ಟಕ ನಿರ್ವಾಣಕ್ಕೆ ಕ್ರಮ ವಹಿಸಲಾಗಿದೆ, ಕುಣಿಗಲ್, ಗುಬ್ಬಿ, ಕೊರಟಗೆರೆ ತಾಲೂಕಿನಲ್ಲಿಯೂ ದಾನಿಗಳ ನೆರವಿನಿಂದ ಆಮ್ಲಜನಕ ಉತ್ಪಾದನಾ ಟಕ ಪ್ರಾರಂಭವಾಗಲಿದೆ. ಜಿಲ್ಲೆಯ 150 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 1 ಆಮ್ಲಜನಕ ಬೆಡ್ ವ್ಯವಸ್ಥೆ ಲಭ್ಯವಾಗಲಿದೆ ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಗ್ರಾಮೀಣ ಜನರು ವಾತು ಕೇಳುತ್ತಿಲ್ಲ, ನಿಯಮ ಪಾಲಿಸುತ್ತಿಲ್ಲ. ಹಾಗಾಗಿ, ಅವಶ್ಯಕ ಇರುವ ಹಳ್ಳಿಗಳಲ್ಲಿ ಲಾಕ್‌ಡೌನ್ ವಾಡುವುದು ಸೂಕ್ತ, ಎಲ್ಲಿಯೂ ಅನುಮತಿ ಇಲ್ಲದೆ ಜಾತ್ರೆ, ಅಕ್ರಮ ಜೂಜಾಟದಲ್ಲಿ ಭಾಗವಹಿಸಿದ ಪರಿಣಾಮ ಸೋಂಕು ಹೆಚ್ಚಾಗಿದೆ, ಸೋಂಕು ನಿಯಂತ್ರಣವಾಗುವುದೆಂಬ ಹಿನ್ನೆಲೆಯಲ್ಲಿ ಮೂಢನಂಬಿಕೆಯಿಂದ ಜನರು ಕದ್ದು ಮುಚ್ಚಿ ಪೂಜೆ, ಹವನ ವಾಡುತ್ತಿದ್ದಾರೆ ಎಂದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಮತ್ತಿತರರು ಇದ್ದರು.
ಮನೆಯಲ್ಲಿಯೇ 16 ಸಾವಿರ ಸೋಂಕಿತರು! : ಜಿಲ್ಲೆಯಾದ್ಯಂತ 16 ಸಾವಿರ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದಾರೆ, ಕೋವಿಡ್‌ಕೇರ್ ಸೆಂಟರ್‌ನಲ್ಲಿ ಇರುವವರಿಗೆ ಆಕ್ಸಿಜನ್ ಸಮಸ್ಯೆಯಾಗುವುದಕ್ಕೆ ಮುಂಚೆಯೇ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಜನರು ಹೆದರುವ ಅಗತ್ಯವಿಲ್ಲ, ಮೂರನೇ ಅಲೆ ನಿಯಂತ್ರಣಕ್ಕೂ ಅಗತ್ಯ ಸಿದ್ಧತೆಗಳನ್ನು ರೂಪಿಸಲಾಗುತ್ತಿದೆ. ಮಕ್ಕಳಿಗೆ ಲಸಿಕೆ ನೀಡಲು ಅವಕಾಶ ನೀಡಿದರೆ ಇಲ್ಲಿಯೂ ವ್ಯವಸ್ಥೆಯಾಗಲಿದೆ. ಎಬಿಎಆರ್‌ಕೆ ಯೋಜನೆಯಲ್ಲಿ ದಾಖಲಾದ ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಬೇಕಿಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.
ಬ್ಲ್ಯಾಕ್ ಂಗಸ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ: ಸರ್ಕಾರದ ಆದೇಶದಂತೆ ಜಿಲ್ಲಾಸ್ಪತ್ರೆಯಲ್ಲಿ ಬ್ಲ್ಯಾಕ್‌ಫಂಗಸ್ ರೋಗಕ್ಕೆ ಚಿಕಿತ್ಸೆ ನೀಡಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು. ಈವರೆಗೆ 21 ಬ್ಲ್ಯಾಕ್ ಫಂಗಸ್ ಪ್ರಕರಣ ವರದಿಯಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ 15 ಸೋಂಕಿತರಿಗೆ ಚಿಕಿತ್ಸೆ ನೀಡಲು ವಿಶೇಷ ವಾರ್ಡ್ ವ್ಯವಸ್ಥೆ ವಾಡಲಾಗಿದೆ. ನಗರದ ಸಿದ್ಧಾರ್ಥ ಮತ್ತು ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲು ಸೂಚನೆ ನೀಡಲಾಗಿದೆ. ಈ ರೋಗ ಕಾಣಿಸಿಕೊಂಡವರಿಗೆ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಬ್ಲ್ಯಾಕ್ ಫಂಗಸ್‌ನಿಂದ ಕುಣಿಗಲ್‌ನಲ್ಲಿ ಇಬ್ಬರು, ಪಾವಗಡದಲ್ಲಿ ಒಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.