

ಕುಶಾಲನಗರ:
ಕುಶಾಲನಗರದ ಕೈಗಾರಿಕೋದ್ಯಮಿಗಳು ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 2.22 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಹೇಳಿದರು. ಶನಿವಾರ ಇಲ್ಲಿನ ಎಪಿಸಿಎಂಎಸ್ ಭವನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಶಾಲನಗರದ ಕೈಗಾರಿಕೋದ್ಯಮಿಗಳು ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘ ಕುಶಾಲನಗರ, ಸೋಮವಾರಪೇಟೆ, ಮಡಿಕೇರಿ ತಾಲೂಕು ಹಾಗೂ ನೆರೆಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿದ್ದು, ಸಂಘದಲ್ಲಿ 1,404 ಸದಸ್ಯರಿದ್ದಾರೆ.
ಸಂಘದ ವತಿಯಿಂದ ವನಸಿರಿ ಕಾರ್ಯಕ್ರಮದಡಿ ಕುಶಾಲನಗರದ ವಿವಿಧ ಬಡಾವಣೆಗಳು ಸೇರಿದಂತೆ ಕೂಡಿಗೆ, ಕೂಡ್ಲೂರು ಮೊದಲಾದ ಪ್ರದೇಶಗಳಲ್ಲಿ ಟ್ರೀ ಗಾರ್ಡ್ಗಳೊಂದಿಗೆ 700 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿದ್ದು ಅವುಗಳು ಈಗ ಮರಗಳಾಗಿ ಪಕ್ಷಿ - ಪ್ರಾಣಿಗಳಿಗೆ ನೆರಳು ನೀಡುತ್ತಿವೆ.
ಈ ಬಾರಿಯೂ 150 ಗಿಡಗಳನ್ನು ನೆಟ್ಟು ಬೆಳೆಸಲು ಯೋಜಿಸಲಾಗಿದೆ.
ಕುಶಾಲನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ 11 ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ಗಣಕಯಂತ್ರದ ಪ್ರಯೋಗಾಲಯ ನಿರ್ಮಿಸಲು ತೀರ್ಮಾನಿಸಲಾಗಿದೆ. ಸಂಘದ ಲಾಭಾಂಶದಲ್ಲಿ ಕುಶಾಲನಗರದ ಆಯ್ದ ಕೆಲವೊಂದು ಸಹಕಾರ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದರು.
ಸಂಘದ ಸದಸ್ಯರಿಂದ ಎರಡು ಸಾವಿರ ರೂ. ಮರಣ ನಿಧಿ ಕಟ್ಟಿಸಿಕೊಂಡು ಮೃತಪಟ್ಟಾಗ 24 ಸಾವಿರ ರೂ.ಗಳ ಮರಣನಿಧಿ ಹಣ ಕೊಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಂಘದ ವತಿಯಿಂದ ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಡಿ. ಶ್ರೀಜೇಶ್, ವ್ಯವಸ್ಥಾಪಕ ಆರ್. ರಾಜ ಇದ್ದರು.